ಬೆಂಗಳೂರು: ‘ರಾಜ್ಯ ಬಿಜೆಪಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರ ವಿರುದ್ಧ ಸರಣಿ ಟ್ವೀಟ್ ಮಾಡಿ ಕುಟುಂಬ ರಾಜಕಾರಣವನ್ನು ಟೀಕಿಸಿ ಮತ್ತೆ ಲಕ್ಕಿಡಿಪ್ ಸಿಎಂ ಎಂದು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.
”ಮಾನ್ಯ ಮಾಜಿ ಲಕ್ಕಿಡಿಪ್ ಸಿಎಂ ಹೆಚ್ ಡಿಕೆ ಅವರೇ,ಮುಂದಿನ ಚುನಾವಣೆಯಲ್ಲಿ ಮಿಶನ್-123 ಎನ್ನುತ್ತಿದ್ದೀರಿ. ನಿಮ್ಮ ಕುಟುಂಬದ ಎಲ್ಲಾ ಕವಲುಗಳಿಗೂ ಈಗಾಗಲೇ ಅವಕಾಶ ಕಲ್ಪಿಸಿದ್ದೀರಿ.ಮುಂದಿನ ಚುನಾವಣೆಗೆ ಇನ್ನು ಯಾರ್ಯಾರು ನಿಮ್ಮ ಮನೆತನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ?” ಎಂದು ಪ್ರಶ್ನಿಸಿದೆ.
”ಜೆಡಿಎಸ್ ಮಿಶನ್-123 ಎನ್ನುವ ಸಂಕಲ್ಪ ಮಾಡಿದೆ. ಮಾನ್ಯ ಮಾಜಿ ಲಕ್ಕಿಡಿಪ್ ಸಿಎಂ ಹೆಚ್ ಡಿಕೆ ಅವರೇ, ಇದರರ್ಥ ಜೆಡಿಎಸ್ 123 ಸ್ಥಾನ ಗಳಿಸಲಿದೆ ಎಂದೋ ಅಥವಾ ಯಾವ ಪಕ್ಷವನ್ನೂ 123 ಸ್ಥಾನ ದಾಟಲು ಬಿಡುವುದಿಲ್ಲವೆಂದೋ?ಅತಂತ್ರದ ತಂತ್ರ ಹೂಡಿ ಮತ್ತೆ ಸಾಂದರ್ಭಿಕ ಶಿಶು ಎನಿಸಿಕೊಳ್ಳುವ ತವಕವೇ?” ಎಂದು ಇನ್ನೊಂದು ಟ್ವೀಟ್ ಮಾಡಿದೆ.
”ನಮ್ಮ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲ ಎಂದು ಮಾಜಿ ಲಕ್ಕಿಡಿಪ್ ಸಿಎಂ ಹೆಚ್ ಡಿಕೆ ಹೇಳಿದ್ದರು.ಅಲ್ಲಿಗೆ, ಮಿಶನ್-123 ನಲ್ಲಿ ಕುಟುಂಬ ವರ್ಗದವರೇ ಸಿಂಹಪಾಲು ಪಡೆಯುವುದು ಸ್ಪಷ್ಟ.ಅಂದಹಾಗೆ, ನಿಮ್ಮ ಕುಟುಂಬ ವರ್ಗದಿಂದ ಯಾರಾದರೂ ಬಿಟ್ಟು ಹೋಗಿದ್ದರೆ ಅವರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತೀರಿ?”ಎಂದು ಪ್ರಶ್ನಿಸಿದೆ.
”ಬಹುಮತ ಪಡೆಯುತ್ತೇವೆ ಎಂದೆನ್ನುವ ಮೂಲಕ ಮಾಜಿ ಲಕ್ಕಿಡಿಪ್ ಸಿಎಂ ಈಗ ಮತ್ತೊಂದು ಗಾಳಿಪಟ ಸಿದ್ದಪಡಿಸುತ್ತಿದ್ದಾರೆ, ಇದು ಟಿಕೆಟ್ ಆಕಾಂಕ್ಷಿಗಳನ್ನು ಸೆಳೆಯುವ ತಂತ್ರವೇ? ಸೂತ್ರವಿಲ್ಲದ ಗಾಳಿಪಟದ ಹಾರಾಟ ಹೇಗಿರುತ್ತದೆ ಎಂದು ಮಾಜಿ ಶಾಸಕ ಕೋನರೆಡ್ಡಿಯವರನ್ನು ಕೇಳಿದರೆ ಉತ್ತರ ಸಿಗಬಹುದೇ? ಅಥವಾ ರಾಜ್ಯಸಭೆಯ ಕನಸು ಕಂಡ ಫಾರೂಕ್ ವಿವರಿಸಬಹುದೇ?”ಎಂದು ಪ್ರಶ್ನಿಸಿದೆ.
”ಮಾನ್ಯ ಬ್ರದರ್, ನಿಮ್ಮ ಪಕ್ಷದ ಮಿಶನ್-123 ಗೆ ತೆನೆ ಹೊರಬೇಕೆಂದರೆ ಒಬ್ಬರೇ ಪಕ್ಷಕ್ಕೆ ಸೇರಬೇಕೋ, ಕುಟುಂಬ ಸಮೇತರಾಗಿ ಸೇರಬೇಕೋ? ಏಕೆಂದರೆ ಮಾಜಿ ಲಕ್ಕಿಡಿಪ್ ಸಿಎಂ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಮಾತ್ರ ಅವಕಾಶ. ಇನ್ನು ಕೆಲವು ಕಡೆ ಪ್ರಚಾರ ಮಾಡುವುದಕ್ಕೂ ಕುಟುಂಬದವರು ಮಾತ್ರ ಉಳಿಯುವುದಲ್ಲವೇ?”ಎಂದು ಸರಣಿ ಟ್ವೀಟ್ ಗಳ ಮೂಲಕ ಮತ್ತೆ ಕುಟುಂಬ ರಾಜಕಾರಣದ ವಿರುದ್ಧ ಪ್ರಶ್ನಿಸಿದೆ.