Advertisement

ಅನರ್ಹ ಶಾಸಕರಿಗೆ ಬಿಜೆಪಿ ವರಿಷ್ಠರ ಭೇಟಿ ಭರವಸೆ

11:48 PM Aug 19, 2019 | Team Udayavani |

ಬೆಂಗಳೂರು: ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಅನರ್ಹಗೊಂಡಿರುವ ಹಲವು ಶಾಸಕರಲ್ಲಿ ಆತಂಕ ಮೂಡಿದಂತಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭಾನುವಾರ ಭೇಟಿಯಾಗಿ ಚರ್ಚಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಸದ್ಯದಲ್ಲೇ ವರಿಷ್ಠರ ಭೇಟಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಅನರ್ಹತೆಗೊಂಡಿರುವ ಶಾಸಕರಾದ ಎಚ್‌.ವಿಶ್ವನಾಥ್‌, ಬೈರತಿ ಬಸವರಾಜು, ಎಸ್‌.ಟಿ. ಸೋಮಶೇಖರ್‌, ಕೆ.ಗೋಪಾಲಯ್ಯ, ಮುನಿರತ್ನ ಇತರರು ಭಾನುವಾರ ರಾತ್ರಿ ಡಾಲರ್ ಕಾಲೋನಿ ನಿವಾಸದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು.

ಹಿಂದಿನ ಸ್ಪೀಕರ್‌ ಶಾಸಕ ಸ್ಥಾನದಿಂದ ಅನರ್ಹತೆ ಗೊಳಿಸಿ ಹೊರಡಿಸಿರುವ ಆದೇಶವನ್ನು ಅನರ್ಹ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ, ಕಾನೂನು ನೆರವು ಇತರೆ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಜತೆಗೆ ಸಂಪುಟ ವಿಸ್ತರಣೆ ಕುರಿತು ಶಾಸಕರು ಚರ್ಚೆ ನಡೆಸಿದ್ದಾರೆ. ಹಿಂದೆ ನೀಡಿದ ಭರವಸೆ ಯಂತೆ ಮುಂದೆ ಕಲ್ಪಿಸಬೇಕಾದ ಸ್ಥಾನಮಾನಗಳ ಬಗ್ಗೆಯೂ ಪ್ರಸ್ತಾಪಿಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಅನರ್ಹತೆಗೊಂಡ ಶಾಸಕರು ಪ್ರಸ್ತಾಪಿಸಿದ ವಿಚಾರಗಳಿಗೆ ಸಮಾಧಾನದಿಂದಲೇ ಸ್ಪಂದಿಸಿದ ಮುಖ್ಯಮಂತ್ರಿಗಳು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ ನೀಡಲಿರುವ ಆದೇಶದ ಅನ್ವಯ ಮುಂದಿನ ಕ್ರಮ ವಹಿಸಲಾಗುವುದು ಎಂಬುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ವರಿಷ್ಠರ ಭೇಟಿ ಭರವಸೆ: ಸಂಪುಟ ವಿಸ್ತರಣೆಯಾಗಿ ಆಡಳಿತ ಯಂತ್ರ ಸುಗಮವಾಗಿ ನಡೆಯುವ ವ್ಯವಸ್ಥೆ ಕಲ್ಪಿಸಿದ ಬಳಿಕ ವರಿಷ್ಠರ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಯಾವುದೇ ಬೆಳವಣಿಗೆಯಿಂದ ವಿಚಲಿತರಾಗುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಗಳು ಅಭಯ ನೀಡಿದ್ದಾರೆಂದು ಮೂಲಗಳು ಹೇಳಿವೆ. ಈ ಹಿಂದೆ ನಡೆದ ಚರ್ಚೆಯಂತೆಯೇ ಮುಂದಿನ ಪ್ರಕ್ರಿಯೆಗಳೂ ನಡೆಯಲಿವೆ.

Advertisement

ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಸೇರಿ ಇತರೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಬಿಬಿಎಂಪಿ ಮೇಯರ್‌, ಉಪಮೇಯರ್‌ ಆಯ್ಕೆ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಅನರ್ಹಗೊಂಡ ಶಾಸಕರೊಬ್ಬರು ತಿಳಿಸಿದರು. ಸೋಮವಾರವೂ ಯಡಿಯೂರಪ್ಪ ಅವರ ನಿವಾಸಕ್ಕೆ ಮುನಿರತ್ನ ಭೇಟಿ ನೀಡಿದ್ದರು. ಯಡಿಯೂರಪ್ಪ ಅವರು ವಿಧಾನಸೌಧಕ್ಕೆ ತೆರಳಿದ ಬಳಿಕ ಮುನಿರತ್ನ ಅವರು ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರೊಂದಿಗೆ ಚರ್ಚಿಸಿದ್ದು ಚರ್ಚೆಗೆ ಗ್ರಾಸವಾಯಿತು.

ಬಿಬಿಎಂಪಿ ಮೇಯರ್‌, ಉಪಮೇಯರ್‌ ಚುನಾವಣೆ ಸದ್ಯದಲ್ಲೇ ನಡೆಯಲಿದ್ದು, ಆ ವಿಚಾರದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.ಮಾತುಕತೆ ಬಳಿಕ ಪ್ರತಿಕ್ರಿಯಿಸಿದ ಮುನಿರತ್ನ, ಬಿಬಿಎಂಪಿಯಲ್ಲಿ ಯಾರಿಗೆ ಸಂಖ್ಯಾ ಬಲವಿರುತ್ತದೆಯೋ ಅವರು ಮೇಯರ್‌ ಆಗುತ್ತಾರೆ. ನಾಲ್ಕು ವರ್ಷದ ಹಿಂದೆಯೇ ಬಿಜೆಪಿಯವರು ಮೇಯರ್‌ ಆಗಬೇಕಿತ್ತು ಎಂದು ಮಾರ್ಮಿಕವಾಗಿ ನುಡಿದರು.

ರಮೇಶ್‌ ಜಾರಕಿಹೊಳಿ ಭೇಟಿ ಮಾಡಿದ ಜೊಲ್ಲೆ
ಬೆಂಗಳೂರು: ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಅನರ್ಹ ಶಾಸಕರ ಗುಂಪಿನ ನಾಯಕ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶಶಿಕಲಾ ಜೊಲ್ಲೆ, ರಮೇಶ್‌ ಜಾರಕಿಹೊಳಿ ಅವರ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಪ್ರಯತ್ನ ನಡೆಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಅದೇ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next