Advertisement

 ಬಿಜೆಪಿ ಹಿರಿಯ ಕಾರ್ಯಕರ್ತರ ಸಮಾವೇಶ 

11:01 AM Jan 22, 2018 | Team Udayavani |

ಮಹಾನಗರ: ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ವೇಳೆ ದೇಶವನ್ನು ಕಾಂಗ್ರೆಸ್‌ ರಹಿತವನ್ನಾಗಿ ಮಾಡುವಂತೆ ಹೇಳಿದ್ದರು. ಆ ಗುರಿಯ ಹತ್ತಿರ ನಾವಿದ್ದೇವೆ. ಅದಕ್ಕಾಗಿ ಮನೆ ಮನೆ ಭೇಟಿ ಮಾಡಿ ಜನರನ್ನು ಸಂಪರ್ಕಿಸುವ ಕೆಲಸವಾಗಬೇಕು. ಅದುಬಿಟ್ಟು ಸಾಮಾಜಿಕ ಜಾಲತಾಣಗಳ ಮೂಲಕ ರಾಹುಲ್‌ ಗಾಂಧಿಯನ್ನು, ಸಿದ್ದರಾಮಯ್ಯರನ್ನು ಲೇವಡಿ ಮಾಡಿಕೊಂಡು ಮೈಮರೆತರೆ ಗುಜರಾತ್‌ನಲ್ಲಿ ಬಿಜೆಪಿಗೆ ಎದುರಾದ ಅಪಾಯ ಇಲ್ಲೂ ಆಗಬಹುದು ಎಂದು ಆರೆಸ್ಸೆಸ್‌ ಹಿರಿಯ ಪ್ರಚಾರಕ ಬಾಲಕೃಷ್ಣ ಮಲ್ಯ ಹೆಬ್ರಿ ಹೇಳಿದ್ದಾರೆ.

Advertisement

ಮಂಗಳೂರಿನ ಸಂಘ ನಿಕೇತನದಲ್ಲಿ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಆಶ್ರಯದಲ್ಲಿ ರವಿವಾರ ಆಯೋಜಿಸಿದ್ದ ಬಿಜೆಪಿ ಹಿರಿಯ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.  ಕರ್ನಾಟಕದಲ್ಲಿ ಕಮಲ ಅರಳಬೇಕಾದರೆ, ಬಿಜೆಪಿ ಅಧಿಕಾರ ಸೂತ್ರ ಹಿಡಿಯಬೇಕಾದರೆ, ಯುವಕಾರ್ಯಕರ್ತರು ಹೆಚ್ಚು ಪರಿಶ್ರಮ ಪಡಬೇಕಾಗಿದೆ. ಸಾಮಾಜಿಕ ಜಾಲತಾಣವನ್ನಷ್ಟೇ ನಂಬಿಕೊಂಡು ಕೂತರೆ ಎಲ್ಲವೂ ಪೂರ್ಣವಾಗಲಾರದು. ಗುಜರಾತ್‌ನಲ್ಲಿ ಅತಿಯಾದ ಆತ್ಮವಿಶ್ವಾಸದಿಂದಾಗಿ ಬಿಜೆಪಿಗೆ ಹಿನ್ನಡೆಯಾಗುತ್ತಿತ್ತು, ಅಂತಿಮವಾಗಿ ಮೋದಿ ಹಾಗೂ ಅಮಿತ್‌ ಶಾ ನೇರವಾಗಿ ಕಣಕ್ಕೆ ಧುಮುಕಿದ್ದರಿಂದ ಗೆಲುವು ಸಿಕ್ಕಿದೆ ಎಂದರು.

ರಾಷ್ಟ್ರ ಉತ್ತಮ ಸ್ಥಿತಿಗೆ ತಲುಪಲಿ
ನಾವು ಹಿರಿಯ ಕಾರ್ಯಕರ್ತರಾಗಿರುವುದರಿಂದ ನಮಗೆ ಯಾವುದೇ ಆಸೆ, ಹಂಬಲವಿಲ್ಲ. ರಾಷ್ಟ್ರವು ಉತ್ತಮ ಸ್ಥಿತಿ ತಲಪಬೇಕೆಂಬುದು ಮಾತ್ರ ನಮ್ಮ ಆಶಯವಾಗಿದೆ. ಸಂಘಟನೆ ಎನ್ನುವುದು ಈಗ ಅಭೇದ್ಯವಾಗಿ ಸಮುದ್ರದಲ್ಲಿ ಚಿಕ್ಕದಾಗಿ ಕಾಣುವ ಮಂಜುಗಡ್ಡೆಯಂತೆ ಬುಡದಲ್ಲಿ ದೃಢವಾಗಿ ನಿಂತಿದೆ. ಇದನ್ನು ಹೀಗೆಯೇ ಕಾಪಾಡುವ ಹೊಣೆಗಾರಿಕೆ ಯುವ ಕಾರ್ಯಕರ್ತರಲ್ಲಿದೆ ಎಂದರು.

ರಾಷ್ಟ್ರಹಿತಕ್ಕಾಗಿ ದುಡಿಯಿರಿ
ಹಿರಿಯ ಕಾರ್ಯಕರ್ತೆ ಶಾರದಾ ಆಚಾರ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ರಾಷ್ಟ್ರಹಿತಕ್ಕಾಗಿ ದುಡಿಯುವುದೇ ಬಿಜೆಪಿಯ ಗುರಿಯಾಗಬೇಕಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲೂ ಕೇಸರಿ ಅರಳಬೇಕು ಎಂಬ ಆಶಯ ಶೀಘ್ರದಲ್ಲಿ ಈಡೇರಲಿ ಎಂದು ಹಾರೈಸಿದರು.

ವಿಧಾನ ಪರಿಷತ್‌ ಸದಸ್ಯ ಭಾನುಪ್ರಕಾಶ್‌, ಹಿರಿಯ ಕಾರ್ಯಕರ್ತ ಚಂದ್ರಹಾಸ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಂಗಳೂರು ನಗರ ದಕ್ಷಿಣ ಕ್ಷೇತ್ರಾಧ್ಯಕ್ಷ ವೇದವ್ಯಾಸ ಕಾಮತ್‌ ಉಪಸ್ಥಿತರಿದ್ದರು. ಮಾಜಿ ಶಾಸಕ ಎನ್‌. ಯೋಗೀಶ್‌ ಭಟ್‌ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next