ನಗರ: ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುವ ಬಿಜೆಪಿ ಹಾಗೂ ಎಸ್‌ಡಿಪಿಐ ಪಕ್ಷ ಒಂದೇ ನಾಣ್ಯದ ಎರಡು ಮುಖಗಳು ಎಂದು ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸಂಯೋಜಕ ನೂರುದ್ದೀನ್ ಸಾಲ್ಮರ ಹಾಗೂ ಪುತ್ತೂರು ಬ್ಲಾಕ್ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್ ರಾಜ್ಯದ 28 ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾತ್ರ ಎಸ್‌ಡಿಪಿಐ ಸ್ಪರ್ಧಿಸಿದೆ. ಕಳೆದ ಐದು ವರ್ಷದಲ್ಲಿ ಬಿಜೆಪಿ ವಿರುದ್ಧ ಹೋರಾಡುತ್ತಾ ಬಂದ ಈ ಪಕ್ಷ ಈಗ ಚುನಾವಣ ಕಣದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತದೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂದವರು ಆರೋಪಿಸಿದರು.
ಎಸ್‌ಡಿಪಿಐಗೆ ಕೇವಲ ಅದರ ಸದಸ್ಯರ ಮತಗಳು ಮಾತ್ರ ಬೀಳುತ್ತವೆಯೇ ಹೊರತು ಇತರರ ಮತ ಸಿಗುವುದಿಲ್ಲ. ಸಾಮರಸ್ಯ ಬಯಸುವ ಜನ ಬಿಜೆಪಿ ಮತ್ತು ಎಸ್‌ಡಿಪಿಐ ಜತೆ ಹೋಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಶರೀಯತ್ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಲಾಖ್ ನಿಷೇಧ ಕಾನೂನು ತಂದ ಮೋದಿ ಸರಕಾರ ಈ ಮೂಲಕ ಮುಸ್ಲಿಮ್ ಸಮುದಾಯದ ಮೇಲೆ ದಬ್ಟಾಳಿಕೆ ಮಾಡಿದೆ. ಈಶಾನ್ಯ ಭಾಗದಿಂದ ದೇಶಕ್ಕೆ ಬರುವ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲು ಬದ್ಧ ಎಂದು ಬಿಜೆಪಿ ಪ್ರಣಾಳಿಕೆ ತಿಳಿಸಿದೆ. ಅದರಲ್ಲಿ ಇತರ ಅಲ್ಪಸಂಖ್ಯಾಕ ಧರ್ಮಗಳನ್ನು ಹೆಸರಿಸಿ ಮುಸ್ಲಿಂ ಮತ್ತು ಕ್ರೈಸ್ತರ ಹೆಸರು ಬಿಡುವ ಮೂಲಕ ಉದ್ದೇಶಪೂರ್ವಕವಾಗಿ ಬಿಜೆಪಿ ತಾರತಮ್ಯ ಧೋರಣೆ ಅನುಸರಿಸಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾಕ ಘಟಕದ ಕೆಪಿಸಿಸಿ ಪ್ರಚಾರ ಸಮಿತಿಯ ನಜೀರ್ ಮಠ, ರಾಜ್ಯ ಯುವ ಕಾಂಗ್ರೆಸ್ ಸಂಯೋಜಕ ಅಬ್ದುಲ್ ಸಮದ್ ಸೋಂಪಾಡಿ, ಯುವ ಕಾಂಗ್ರೆಸ್ ಪದಾಧಿಕಾರಿ ನವಾಜ್ ಕೆರೆಮೂಲೆ ಮತ್ತಿತರರು ಉಪಸ್ಥಿತರಿದ್ದರು.