ಬೆಂಗಳೂರು : ‘ದಲಿತರು ಬಿಜೆಪಿಗೆ ಹೊಟ್ಟೆ ಪಾಡಿಗಾಗಿ ಹೋಗಿದ್ದಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆ ವಿರೋಧಿಸಿ
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಘಟಕದ ವತಿಯಿಂದ ಬುಧವಾರ ನಗರದ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ , ಶಾಸಕ ಪಿ ರಾಜೀವ್ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಕುಡಚಿ ಶಾಸಕ ರಾಜೀವ್ ಅವರು ಮಾತನಾಡಿ ಸಿದ್ದರಾಮಯ್ಯ ವಿರುದ್ದ ಆಕ್ರೋಶ ಹೊರಹಾಕಿದರು. ”ಸಿದ್ದರಾಮಯ್ಯ ಹೇಳಿಕೆ ಕೇವಲ ರಾಜಕೀಯ ಹೇಳಿಕೆಯಲ್ಲ, ಅಂಬೇಡ್ಕರ್ ಕೊಟ್ಟ ಹಕ್ಕನ್ನು ಕಿತ್ತುಕೊಳ್ಳುವ ಹೇಳಿಕೆ. ದಲಿತರು ಹೊಟ್ಟೆಪಾಡಿಗಾಗಿ ಆಂದೋಲನ ನಡೆಸುತ್ತಿದ್ದಾರೆ, ಸಿದ್ದರಾಮಯ್ಯ ಹೊಟ್ಟೆಪಾಡಿಗಾಗಿ ಜೆಡಿಎಸ್ ತೊರೆದಿದ್ದು, ಹೊಟ್ಟೆಪಾಡಿಗಾಗಿ ಕಾಂಗ್ರೆಸ್ ಸೇರಿದ್ದು. ಸಿದ್ದರಾಮಯ್ಯ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ನೋವಾಗಿದೆ. ಸಿದ್ದರಾಮಯ್ಯ ಆದಷ್ಟು ಬೇಗ ಕ್ಷಮೆ ಕೇಳಬೇಕು. ಇಲ್ಲವಾದರೆ, ನಿಮ್ಮ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಲ್ಲ” ಎಂದರು.
ಅಶ್ವಥ್ ನಾರಾಯಣ ಕಿಡಿ
”ಸಿದ್ದರಾಮಯ್ಯನವರೆ ನಿಮ್ಮ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ ಹೇಳಿಕೆ.ಎಲ್ಲರಿಗೂ ಸ್ವಾತಂತ್ರ್ಯ ವಿದೆ ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೊಗಬಹುದು.ನೀವು ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಹೊಗಿಲ್ಲವೇ? ನಿಮ್ಮ ಬೇಜವಾಬ್ದಾರಿತನದಿಂದ ಚಾಮುಂಡೇಶ್ವರಿಯಲ್ಲಿ ನಿಮ್ಮನ್ನ ಸೋಲಿಸಿದರು” ಎಂದರು.
”ಪರಮೇಶ್ವರ್ ಅವರು ಸಿಎಂ ಆಗ್ತಾರೆ ಎಂದು ಸೋಲಿಸಿದ್ದು ಸಿದ್ದರಾಮಯ್ಯನವರು, ಅವರಿಗೆ ಪರಿಷತ್ ಸದಸ್ಯರನ್ನಾಗಿ ಮಾಡಿ ಡಿಸಿಎಂ ಕೊಡಲಿಲ್ಲ.ಮಲ್ಲಿಕಾರ್ಜುನ ಖರ್ಗೆ ಏನಾದರು? , ಮಹದೇವಪ್ಪ ನವರನ್ನ ಏನು ಮಾಡಿದಿರಿ ? ಪುಲಿಕೇಶಿ ನಗರದ ಅಖಂಡ ಶ್ರೀನಿವಾಸ ಮೂರ್ತಿಗೆ ಏನು ಮಾಡಿದಿರಿ ? ನಿಮ್ಮ ಜೊತೆ ಇದ್ದ ದಲಿತರನ್ನ, ಅಲ್ಪಸಂಖ್ಯಾತರನ್ನ ತುಳಿದು ನೀವು ಮೇಲೆ ಬಂದಿರಿ. ಮುಂದಿನ ದಿನಗಳಲ್ಲಿ ಚಾಮುಂಡೇಶ್ವರಿಯಲ್ಲಿ ಜನ ಕೊಟ್ಟ ತೀರ್ಪನ್ನ ಬಾದಾಮಿಯಲ್ಲಿ ಕೊಡುತ್ತಾರೆ. ಹಾನಗಲ್ ಗೆದ್ದಿದ್ದಕ್ಕೆ ತಲೆ ಮೇಲೆ ಏನೊ ಬಂದಂತೆ ಆಡ್ತಿದ್ದಾರೆ. ಸಿದ್ದರಾಮಯ್ಯ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ರಾಜ್ಯದ ದಲಿತ ಸಮುದಾಯ ನಿಮ್ಮ ವಿರುದ್ಧ ತೀವ್ರ ಹೋರಾಟ ಮಾಡಲಿದೆ” ಎಂದು ಬಿಜೆಪಿ ನಾಯಕ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ.