ಬೆಂಗಳೂರು: ಬಿಜೆಪಿಯವರ ಭ್ರಷ್ಟಾಚಾರ, ತಪ್ಪುಗಳನ್ನು ಮುಚ್ಚಿಕೊಳ್ಳಲು ಜಾತಿ ಮೊರೆ ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್‌ನ ಪೇಸಿಎಂ ಅಭಿಯಾನ ಲಿಂಗಾಯತ ಮುಖ್ಯಮಂತ್ರಿಗೆ ಅಪಮಾನ ಮಾಡುವ ಷಡ್ಯಂತ್ರ ಎಂಬ ಆರೋಪಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರರ ಸಂಘದವರು ಶೇ. 40 ಪರ್ಸೆಂಟೆಜ್ ಬಗ್ಗೆ ಬಿಜೆಪಿ ಸರಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಕಳೆದ 1 ವರ್ಷದಿಂದ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ವಿಚಾರವನ್ನು ಅಸೆಂಬ್ಲಿಯಲ್ಲಿ ಎತ್ತಿದರೆ ಜಾತಿ ವಿಚಾರ ಹೇಗೆ ಬರುತ್ತದೆ. ನರೇಂದ್ರ ಮೋದಿಯವರು ಸಿದ್ದರಾಮಯ್ಯ ಸರಕಾರ 10 ಪರ್ಸೆಂಟ್ ಸರಕಾರ ಎಂದು ನನ್ನ ವಿರುದ್ಧ ಆರೋಪ ಮಾಡಿದ್ದರು.
ಸಿದ್ದರಾಮಯ್ಯ ಕುರುಬ ಎಂಬ ಉದ್ದೇಶದಿಂದ ಈ ಆರೋಪ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಏನೂ ಆಧಾರ ಇಲ್ಲದೇ ಈ ಆರೋಪ ಮಾಡಿದ್ದರು. ಹಾಗಾದರೆ ನಮ್ಮಲ್ಲಿ ಲಿಂಗಾಯಿತ ನಾಯಕರು ಇಲ್ಲವೇ ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಇದೀಗ ಬಣ್ಣ ಕಟ್ಟುತ್ತಿದ್ದಾರೆ ಎಂದು ಹೇಳಿದರು.
ಜಾತಿಗೂ, ಭ್ರಷ್ಟಾಚಾರಕ್ಕೂ ಸಂಬಂಧ ವಿಲ್ಲ. ಬೊಮ್ಮಾಯಿ ಓರ್ವ ಸಿಎಂ. ನನ್ನ ವಿರುದ್ಧ ಪುಸ್ತಕ ಹೊರಡಿಸಿದ್ದಾರೆ. ಅದರಲ್ಲಿ ಸುಳ್ಳು ಅಂಶಗಳನ್ನು ಹೇಳಿದ್ದಾರೆ. ಇದನ್ನು ಇಟ್ಟುಕೊಂಡು ಸಿದ್ದರಾಮಯ್ಯ ಕುರುಬರು ಎಂಬುದಕ್ಕೆ ಅಭಿಯಾನ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತದೆಯೇ.
ಯಡಿಯೂರಪ್ಪ ಅವರನ್ನು ಬಿಜೆಪಿಯವರೇ ಮುಖ್ಯ ಮಂತ್ರಿ ಸ್ಥಾನದಿಂದ ಇಳಿಸಿದ್ದಾರೆ. ಹಾಗಾದರೆ ಅವರು ಲಿಂಗಾಯಿತ ರಲ್ಲವೇ, ವಿಜಯೇಂದ್ರ ಅವರನ್ನು ಏಕೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.