ಹುಬ್ಬಳ್ಳಿ: ಬಿಜೆಪಿ ಬಿಡುಗಡೆ ಮಾಡಿದ ಸಂಕಲ್ಪ ಪತ್ರ ರಾಷ್ಟ್ರೀಯ ಸುರಕ್ಷತೆ, ಭದ್ರತೆ, ಸೈನಿಕರಿಗೆ ಕಲ್ಯಾಣ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಬಡತನ ನಿರ್ಮೂಲನೆ ಸೇರಿದಂತೆ ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಯ ಸಶಕ್ತ ಭಾರತ ನಿರ್ಮಾಣದ ಧ್ಯೋತಕವಾಗಿದೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಮೋಹನ ಲಿಂಬಿಕಾಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೋದಿ ಅವರು ಕೈಗೊಂಡ ಕೆಲಸಗಳನ್ನು ಆಧರಿಸಿ ಅವರ ಹೆಸರಿನಲ್ಲಿ ಮತ ಯಾಚಿಸಲಾಗುತ್ತಿದೆ. ಬಿಜೆಪಿಯಲ್ಲಿ
ವ್ಯಕ್ತಿತ್ವಕ್ಕಿಂತ ರಾಷ್ಟ್ರ ಮುಖ್ಯ. ಪಕ್ಷದ ಸಂಕಲ್ಪ ಪತ್ರ ಹಲವು ಜನಪರ ಕಾರ್ಯಗಳನ್ನು ಹೊಂದಿದೆ. ಅಯೋಧ್ಯೆ ಸಮಸ್ಯೆಯನ್ನು ಸೌಹಾರ್ದತೆಯಿಂದ ಮಾತುಕತೆ ಮೂಲಕ ಬಗೆಹರಿಸಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ತಿಳಿಸಿದೆ. ಅಯೋಧ್ಯೆ ಬಗ್ಗೆ ಉಡುಪಿಯ ಪೇಜಾವರ ಶ್ರೀಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದನ್ನು ಪಾಲಿಸುವುದು, ಬಿಡುವುದು ಕೇಂದ್ರಕ್ಕೆ ಬಿಟ್ಟದ್ದು. ಕಪ್ಪುಹಣ ಮರಳಿ ತರುವ ಕುರಿತು ಸ್ವಿಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆದಿದೆ. ಮಹದಾಯಿ ಯೋಜನೆ ಜಾರಿಗೊಳಿಸಲು ಬಿಜೆಪಿ ಬದ್ಧವಾಗಿದೆ. ಅದಕ್ಕಾಗಿ ಕೇಂದ್ರದಿಂದ ನೋಟಿಫಿಕೇಶನ್ ಜಾರಿಯಾಗಬೇಕಿದೆ ಎಂದರು.