ನವದೆಹಲಿ: ದೇಶವನ್ನು 70 ವರ್ಷ ಕಾಲ ಆಳಿದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು 48 ಲಕ್ಷ ಕೋಟಿ ರೂ.ಗಳನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಮೊತ್ತದಿಂದ ಹಲವು ಯೋಜನೆಗಳಿಗೆ ಲಾಭವಾಗುತ್ತಿತ್ತು ಎಂದು ಅದು ಹೇಳಿಕೊಂಡಿದೆ.
ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್‌ಗಳ ಮೂಲಕ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ. “ಕಾಂಗ್ರೆಸ್ ಸಾರ್ವಜನಿಕರ 48,20,69,00,00,000 ರೂ.ಗಳನ್ನು ಲೂಟಿ ಮಾಡಿದೆ. ಈ ಹಣವನ್ನು ರಕ್ಷಣೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಸದುಪಯೋಗ ಪಡಿಸಬಹುದಿತ್ತು. ಈ ಮೊತ್ತದಿಂದ ಕನಿಷ್ಠ 24 ಐಎನ್‌ಎಸ್ ವಿಕ್ರಾಂತ್, 300 ರಫೇಲ್ ಜೆಟ್‌ಗಳನ್ನು ಖರೀದಿಸಬಹುದಿತ್ತು ಹಾಗೂ 1,000 ಮಂಗಳ ಉಪಗ್ರಹ ಯೋಜನೆಗಳನ್ನು ಕೈಗೊಳ್ಳಬಹುದಿತ್ತು,’ ಎಂದು ದೂರಿದೆ.
“ಕಾಂಗ್ರೆಸ್ ಆಳಿದ 70 ವರ್ಷಗಳನ್ನು ಪಕ್ಕಕ್ಕೆ ಇಟ್ಟು, ಈ ಪೈಕಿ ಕೇವಲ 2004ರಿಂದ 2014ರ ಅವಧಿಯನ್ನು ಗಮನಿಸಿದರೆ, ಇದು ಕಳೆದುಹೋದ ದಶಕವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟ್ರಾಚಾರ ನಡೆಯುತ್ತಿದ್ದರೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೋಡಿಯೂ ನೋಡದಂತೆ ಮೌನ ವಹಿಸಿದ್ದರು,’ ಎಂದು ಬಿಜೆಪಿ ಆರೋಪಿಸಿದೆ.
“1.86 ಲಕ್ಷ ಕೋಟಿ ರೂ. ಕಲ್ಲಿದ್ದಲು ಹಗರಣ, 1.76 ಲಕ್ಷ ಕೋಟಿ ರೂ. 2ಜಿ ಸ್ಪೆಕ್ಟ್ರಮ್ ಹಗರಣ, 10 ಲಕ್ಷ ಕೋಟಿ ರೂ. ಮನರೇಗಾ ಹಗರಣ, 70,000 ಕೋಟಿ ರೂ. ಕಾಮನ್‌ವೆಲ್ತ್ ಹಗರಣ, ಇಟಲಿಯೊಂದಿಗೆ ಹೆಲಿಕಾಪ್ಟರ್ ಖರೀದಿ ಒಪ್ಪಂದದಲ್ಲಿ 362 ಕೋಟಿ ರೂ. ಲಂಚ, ರೈಲ್ವೆ ಮಂಡಳಿಯ ಅಧ್ಯಕ್ಷರ ನೇಮಕದಲ್ಲಿ 12 ಕೋಟಿ ರೂ. ಲಂಚ…ಹೀಗೆ ಯುಪಿಎ ಸರಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ,’ ಎಂದು ದೂರಿದೆ.
“ಕಾಂಗ್ರೆಸ್ ನಡೆಸಿರುವ ಭ್ರಷ್ಟಾಚಾರ ಕುರಿತು ಈ “ಕಾಂಗ್ರೆಸ್ ಫೈಲ್ಸ್’ ಕೇವಲ ಟ್ರೈಲರ್ ಆಗಿದೆ. “ಅಭಿ ಫಿಕ್ಚರ್ ಬಾಕಿ ಹೈ'(ಇನ್ನು ಸಿನಿಮಾ ಮುಂದೆ ಇದೆ). ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಬಗ್ಗೆ ಸರಣಿ ಕಂತುಗಳು ಬಿಡುಗಡೆಯಾಗಲಿದೆ,’ ಎಂದು ಬಿಜೆಪಿ ಕಟುವಾಗಿ ಬರೆದುಕೊಂಡಿದೆ.