ವಿಜಯಪುರ: ರಾಜ್ಯದಲ್ಲಿ ಬರ ಅಧ್ಯಯನದ ಹೆಸರಿನಲ್ಲಿ ಬಿಜೆಪಿ ಅಧಿಕಾರದ ಬರಗಾಲ ಆವರಿಸಿದಂತೆ ವರ್ತಿಸುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರು ಸುಳ್ಳು ಹೇಳುವಲ್ಲಿ ಪೈಪೋಟಿಗೆ ಇಳಿದಿದ್ದು, ರಾಜ್ಯದ ಸುಭದ್ರ ಸರ್ಕಾರದ ಪತನಕ್ಕಾಗಿ ಶಾಸಕರನ್ನು ಖರೀದಿಸುವ ಹೇಳಿಕೆ ನೀಡುವಲ್ಲಿಯೇ ಮಗ್ನರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಟೀಕಾ ಪ್ರಹಾರ ನಡೆಸಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಯಂ ತಮ್ಮ ವಿಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ ಬರದಿಂದ ತತ್ತರಿಸುತ್ತಿದ್ದರೂ ನಳಿನ್ ಕುಮಾರ್ ಕಟೀಲ್ ಅವರಿಗೆ ತಿಕೋಟಾ ಭಾಗದಲ್ಲಿ ಅಧ್ಯಯನಕ್ಕೆ ಹೋದಾಗಲೇ ನಮ್ಮ ಸರ್ಕಾರದ ಮಾಡಿದ ನೀರಾವರಿ ಯೋಜನೆಯ ನೀರು ಹರಿಯುವುದು ದರ್ಶನವಾಗಿದೆ ಎಂದು ತಿರುಗೇಟು ನೀಡಿದರು.
ಬರ ಅಧ್ಯಯನಕ್ಕೆ ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರೂ ಕರ್ನಾಟಕ ರಾಜ್ಯದ ಓರ್ವ ಸಂಸದ. ಕೇಂದ್ರ ಸರ್ಕಾರದ ತಂಡ ಬರ ಅಧ್ಯಯನ ನಡೆಸಿದ್ದು, ರಾಜ್ಯಕ್ಕೆ ಬರ ಪರಿಹಾರಕ್ಕೆ ಅನುದಾನ ನೀಡುವಂತೆ ಧ್ವನಿ ಎತ್ತುವ ಕನಿಷ್ಠ ಸೌಜನ್ಯ ತೋರಿಲ್ಲ ಎಂದು ತಿರುಗೇಟು ನೀಡಿದರು.
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ವಿಪಕ್ಷದ ನಾಯಕನನ್ನು ಮಾಡಲಾಗದ ದುಸ್ಥಿಯಲ್ಲಿದ್ದರೂ ಪ್ರಧಾನಿ ಮೋದಿ ಅವರು, ಪಂಚರಾಜ್ಯಗಳ ಚುನಾವಣೆ ಪ್ರಚಾರದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕರ್ನಾಟಕದ ಸುಭದ್ರ ಸರ್ಕಾರದ ಆಡಳಿತದಿಂದ ಕಂಗಾಲಾಗಿದೆ. ಇದರಿಂದಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಭೀತಿ ಇರುವ ಕಾರಣದಿಂದಲೇ ಪ್ರಧಾನಿ ಮೋದಿ ಅವರು ನಮ್ಮ ಮುಖ್ಯಮಂತ್ರಿ ಜಪ ಮಾಡುವಂತಾಗಿದೆ ಎಂದು ತಿರುಗೇಟು ನೀಡಿದರು.
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿ ನಾಯಕರು, ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೋದಿ ಗ್ಯಾರಂಟಿ ಯೋಜನೆ ಘೋಷಿಸುತ್ತಿದೆ. ಇದರೊಂದಿಗೆ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.