Advertisement

ರಾಣಿಬೆನ್ನೂರಲ್ಲೂ ಬಿಜೆಪಿಗೆ ಬಂಡಾಯ ಬಿಸಿ

01:22 PM Nov 16, 2019 | Team Udayavani |

ಹಾವೇರಿ: ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ ಶುಕ್ರವಾರ ಅಭ್ಯರ್ಥಿಯನ್ನು ಘೋಷಿಸುವ ಮೂಲಕ ಟಿಕೆಟ್‌ ಗೊಂದಲಕ್ಕೆ ತೆರೆ ಎಳೆದಿದೆ. ಆದರೆ, ಅನರ್ಹ ಶಾಸಕ ಆರ್‌. ಶಂಕರ್‌ ಹಾಗೂ ಇತರ ಟಿಕೆಟ್‌ ಆಕಾಂಕ್ಷಿಗಳ ಅಸಮಾಧಾನ ಮುಂದುವರಿದಿದೆ.

Advertisement

ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದ ಟಿಕೆಟ್‌ಗಾಗಿ ಸ್ಥಳೀಯವಾಗಿ ಅಷ್ಟೇ ಅಲ್ಲ ರಾಜ್ಯದ ಬೇರೆ ಭಾಗದವರಿಂದಲೂ ಭಾರಿ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಬಿಜೆಪಿ ಅಚ್ಚರಿಯ ಅಭ್ಯರ್ಥಿ ಎಂಬಂತೆ ಶುಕ್ರವಾರ ಅರುಣಕುಮಾರ ಪೂಜಾರ ಅವರಿಗೆ ಟಿಕೆಟ್‌ ಘೋಷಿಸಿದೆ. ಬಿಜೆಪಿಯ ಈ ನಿರ್ಧಾರಕ್ಕೆ ಸ್ಥಳೀಯವಾಗಿ ಕೆಲ ಮುಖಂಡರಿಂದ ವಿರೋಧ ವ್ಯಕ್ತವಾಗಿದ್ದು, ಈ ವಿರೋಧ ಶಮನಗೊಳಿಸುವ ಯತ್ನವೂ ಮುಂದುವರಿದಿದೆ. ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಲ್ಲಿ ಈಶ್ವರಪ್ಪ ಮಗ ಕಾಂತೇಶ, ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಕೂಡ ಇದ್ದರು. ಇವರಲ್ಲಿ ಯಾರೊಬ್ಬರಿಗೆ ಟಿಕೆಟ್‌ ನೀಡಿದರೂ ಅದು ಪಕ್ಷದ ಉನ್ನತ ಮಟ್ಟದ ನಾಯಕರ ನಡುವಿನ ತಿಕ್ಕಾಟಕ್ಕೆ ನಾಂದಿಯಾಗುತ್ತದೆ ಹಾಗೂ ಇದು ಚುನಾವಣೆಯಲ್ಲಿ ಪಕ್ಷದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಘಟಾನುಘಟಿಗಳ ಪುತ್ರರಿಗೆ ಟಿಕೆಟ್‌ ನೀಡದಿರಲು ಪಕ್ಷ ನಿರ್ಧರಿಸಿತು. ಜತೆಗೆ ಸ್ಥಳೀಯರಿಗೆ ಟಿಕೆಟ್‌ ನೀಡುವುದು ಸೂಕ್ತ

ಎಂಬ ತೀರ್ಮಾನಕ್ಕೆ ಬಂದಿತು. ಜಿಲ್ಲೆಯಲ್ಲಿ ವಿಪ ಮಾಜಿ ಸದಸ್ಯ ಶಿವರಾಜ ಸಜ್ಜನರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಸಹ ಆಕಾಂಕ್ಷಿಯಾಗಿದ್ದರು. ಕ್ಷೇತ್ರದಲ್ಲಿ ಸ್ಥಳೀಯವಾಗಿ ಡಾ| ಬಸವರಾಜ ಕೇಲಗಾರ, ಅರುಣಕುಮಾರ ಪೂಜಾರ, ಭಾರತಿ ಜಂಬಗಿ, ಸಂತೋಷ ಪಾಟೀಲ ಸೇರಿದಂತೆ ಅನೇಕರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಇವರಲ್ಲಿ ಪಕ್ಷ ಅರುಣಕುಮಾರ ಪೂಜಾರ ಅವರಿಗೆ ಟಿಕೆಟ್‌ ಘೋಷಿಸಿದೆ.

ಈಶ್ವರಪ್ಪ ಶಿಫಾರಸು?: ಅರುಣಕುಮಾರ ಪೂಜಾರ 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆಗ ಪಕ್ಷ ಕೆಜೆಪಿ-ಬಿಜೆಪಿ ಘಟಕಗಳಾಗಿ ಒಡೆದಿತ್ತು. ಕೆ.ಎಸ್‌. ಈಶ್ವರಪ್ಪ ಪ್ರಭಾವದಿಂದ ಅಂದು ಪೂಜಾರ ಅವರಿಗೆ ಟಿಕೆಟ್‌ ಸಿಕ್ಕಿತ್ತು. ಆಗ ಪೂಜಾರ 9476 ಮತಗಳನ್ನು ಪಡೆದು ಐದನೇ ಸ್ಥಾನ ಪಡೆದಿದ್ದರು. ಇಂದು ಸಹ ಈಶ್ವರಪ್ಪ ಅವರ ಶಿಫಾರಸಿನ ಆಧಾರದಲ್ಲಿಯೇ ಅರುಣಕುಮಾರಅವರಿಗೆ ಟಿಕೆಟ್‌ ಸಿಕ್ಕಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.

ತನ್ಮೂಲಕ ಈಶ್ವರಪ್ಪ ಕ್ಷೇತ್ರದಲ್ಲಿ ತಮ್ಮ ಮಗನಿಗೆ ಟಿಕೆಟ್‌ ಕೊಡಿಸಲು ಸಾಧ್ಯವಾಗದಿದ್ದರೂ ತಮ್ಮ ಬೆಂಬಲಿಗನಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಬಿಜೆಪಿ ಅನರ್ಹ ಶಾಸಕ ಆರ್‌. ಶಂಕರ್‌ ಗೊಂದಲದಿಂದ ಹೊರಬಂದು ಕ್ಷೇತ್ರದಲ್ಲಿ ಅರುಣಕುಮಾರ ಅವರಿಗೆ ಟಿಕೆಟ್‌ ಘೋಷಿಸಿದ್ದು ಸ್ಥಳೀಯವಾಗಿ ಇರುವ ಆಕಾಂಕ್ಷಿಗಳ ಅಸಮಾಧಾನಕ್ಕೆ ಮುಲಾಮು ಹಚ್ಚುವುದು ಬಾಕಿ ಇದೆ.

Advertisement

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.