Advertisement

ಓಬಿಸಿ ವೋಟ್‌ಬ್ಯಾಂಕ್‌ಗೆ ಸೃಷ್ಟಿಗೆ ಬಿಜೆಪಿ ಸಿದ್ಧ

03:45 AM Apr 18, 2017 | Team Udayavani |

ಬೆಂಗಳೂರು: ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ವೋಟ್‌ಬ್ಯಾಂಕ್‌ ಸೃಷ್ಟಿಸುವ ಪ್ರಯತ್ನಕ್ಕೆ ಶೀಘ್ರದಲ್ಲೇ ಚಾಲನೆ ನೀಡಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ.

Advertisement

ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಸಮಾವೇಶವನ್ನು “ಸಂಗೊಳ್ಳಿ ರಾಯಣ್ಣ ಹಿಂದುಳಿದ ವರ್ಗಗಳ ಜಿಲ್ಲಾ ಸಮಾವೇಶ’ ಎಂಬ ಹೆಸರಿನಲ್ಲಿ ಆಯೋಜಿಸಲು ಮುಂದಾಗಿದ್ದು, ಶೀಘ್ರದಲ್ಲೇ ಈ ಕುರಿತು ದಿನಾಂಕ ನಿಗದಿಯಾಗಲಿದೆ.

“ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ’ ಎಂಬ ಘೋಷವಾಕ್ಯದಡಿ ದೇಶಾದ್ಯಂತ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಬಿಜೆಪಿ ಈ ನಿಟ್ಟಿನಲ್ಲಿ ಹಿಂದುಳಿದ ವರ್ಗದ ವೋಟ್‌ಬ್ಯಾಂಕ್‌ ಸೃಷ್ಟಿಸುವ ತಂತ್ರಗಾರಿಕೆ ಆರಂಭಿಸಲು ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನಿರ್ಣಯ ಕೈಗೊಂಡಿದೆ. ಅದರಂತೆ ರಾಜ್ಯದಲ್ಲೂ ಹಿಂದುಳಿದ ವರ್ಗಗಳನ್ನು ಸಂಘಟಿಸುವ ಕೆಲಸವನ್ನು ಈ ಸಮಾವೇಶಗಳ ಮೂಲಕ ಮಾಡಲಾಗುತ್ತದೆ.

ಮೇ ತಿಂಗಳ 6 ಮತ್ತು 7ರಂದು ಮೈಸೂರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು, ಇದಕ್ಕೆ ಮುನ್ನ ಹಿಂದುಳಿದ ವರ್ಗಗಳ ಸಂಘಟನೆ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು. ಕಾರ್ಯಕಾರಿಣಿಯಲ್ಲಿ ಈ ಕುರಿತು ಚರ್ಚಿಸಿದ ಬಳಿಕ ರಾಜ್ಯಾದ್ಯಂತ ಸಮಾವೇಶಗಳ ಮೂಲಕ ಹಿಂದುಳಿದ ವರ್ಗಗಳನ್ನು ಸಂಘಟಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ಉದ್ಭವವಾಗಿ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಆರಂಭಿಸಲಾಗಿತ್ತು. ಈ ಮೂಲಕ ಹಿಂದುಳಿದ ವರ್ಗಗಳನ್ನು ಸಂಘಟಿಸುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ರಾಯಣ್ಣ ಬ್ರಿಗೇಡ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪಕ್ಷದಲ್ಲಿ ಮೂಡಿದ್ದ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಿತ್ತು.

Advertisement

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಪಕ್ಷದ ಮುಖಂಡರನ್ನು ಕರೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು, ಬಿಕ್ಕಟ್ಟು ಶಮನಕ್ಕೆ ಕೆಲವು ಸೂಚನೆಗಳನ್ನು ನೀಡಿದ್ದರು. ಆ ಪೈಕಿ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಅನ್ನು ರಾಜಕೀಯವಾಗಿ ಸಂಘಟಿಸುವುದನ್ನು ನಿಲ್ಲಿಸಬೇಕು. ಅದರ ಬದಲಾಗಿ ಹಿಂದುಳಿದ ವರ್ಗಗಳಿಗಾಗಿಯೇ ಪಕ್ಷದಲ್ಲಿರುವ ಹಿಂದುಳಿದ ವರ್ಗಗಳ ಮೋರ್ಚಾ ಮೂಲಕ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಸಮಾವೇಶ ನಡೆಸಬೇಕು ಎಂಬುದೂ ಒಂದಾಗಿತ್ತು. ಈ ಜವಾಬ್ದಾರಿಯನ್ನು ಈಶ್ವರಪ್ಪ ಅವರಿಗೆ ನೀಡಲಾಗಿತ್ತು.

ಶೀಘ್ರದಲ್ಲೇ ದಿನಾಂಕ ನಿಗದಿ: ಅದರಂತೆ ಏಪ್ರಿಲ್‌ನಿಂದ ಸಮಾವೇಶ ನಡೆಸಲು ಯೋಚಿಸಲಾಗಿತ್ತಾದರೂ ಅಷ್ಟರಲ್ಲಿ ಉಪ ಚುನಾವಣೆ ಘೋಷಣೆಯಾಗಿದ್ದರಿಂದ ಪ್ರಕ್ರಿಯೆ ಮುಂದೂಡಲಾಗಿತ್ತು. ಇದೀಗ ಉಪ ಚುನಾವಣೆ ಮುಗಿದಿರುವುದರ ಜತೆಗೆ ಹಿಂದುಳಿದ ವರ್ಗದ ವೋಟ್‌ಬ್ಯಾಂಕ್‌ ಸೃಷ್ಟಿಸುವ ತಂತ್ರಗಾರಿಕೆ ಆರಂಭಿಸಲು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಹಿಂದುಳಿದ ವರ್ಗಗಳ ಮೋರ್ಚಾ ಮತ್ತು ಸಮಾಜದ ಮುಖಂಡರ ಸಭೆ ಕರೆದು ಜಿಲ್ಲಾ ಸಮಾವೇಶಗಳಿಗೆ ದಿನಾಂಕ ನಿಗದಿಪಡಿಸಿ ಆಯಾ ಜಿಲ್ಲೆಗಳಿಗೆ ಪಟ್ಟಿ ಕಳುಹಿಸಿಕೊಡಲಾಗುವುದು. ಮೈಸೂರನಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿದ ಬಳಿಕ ಸಮಾವೇಶಗಳಿಗೆ ಚಾಲನೆ ನೀಡಲಾಗುವುದು ಎಂದೂ ಮೂಲಗಳು ತಿಳಿಸಿವೆ.

ಸಮಾವೇಶದ ಜತೆ ಜತೆಗೆ ಬ್ರಿಗೇಡ್‌ನಿಂದ ಸಾಮಾಜಿಕ ಚಟುವಟಿಕೆ ಒಂದೆಡೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಸಂಗೊಳ್ಳಿ ರಾಯಣ್ಣ ಜಿಲ್ಲಾ ಸಮಾವೇಶಗಳನ್ನು ನಡೆಸುವುದರ ಜತೆಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ಹಿಂದುಳಿದ ವರ್ಗಗಳ ಪರವಾಗಿ ಸಾಮಾಜಿಕ ಚಟುವಟಿಕೆಗಳನ್ನು ಚುರುಕುಗೊಳಿಸಲು ಕೂಡ ತೀರ್ಮಾನಿಸಲಾಗಿದೆ.

ಈಗಾಗಲೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ ರಾಜ್ಯ ಸದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗಿದೆ. ಇದರ ಜತೆಗೆ ಏ. 19ರಂದು ಬ್ರಿಗೇಡ್‌ನ‌ ಯುವ ಘಟಕದ ಸಭೆ ನಡೆದು ಪದಾಧಿಕಾರಿಗಳ ಪಟ್ಟಿ ಅಂತಿಮಗೊಳಿಸಲಾಗುತ್ತದೆ. ಅಲ್ಲದೆ, ಮಹಿಳಾ ಘಟಕಕ್ಕೂ ಪದಾಧಿಕಾರಿಗಳನ್ನು ನೇಮಿಸಲು ತೀರ್ಮಾನಿಸಲಾಗಿದೆ. ಇದಾದ ಬಳಿಕ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಸರ್ಕಾರಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ಫ‌ಲಾನುಭವಿಗಳಿಗೆ ಅವುಗಳನ್ನು ತಲುಪಿಸುವುದು, ದೇಶಭಕ್ತಿ, ರಾಷ್ಟ್ರೀಯ ನಾಯಕರ ಕುರಿತಂತೆ ವಿವಿಧ ಸ್ಪರ್ದೆಗಳನ್ನು ಏರ್ಪಡಿಸುವುದು ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ರಾಜ್ಯಾದ್ಯಂತ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಜಿಲ್ಲಾ ಸಮಾವೇಶಗಳನ್ನು ಏರ್ಪಡಿಸುವ ಕುರಿತು ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು. ದಲಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ “ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ’ ರಚಿಸಲು ಕಾಯ್ದೆ ರೂಪಿಸಲು ಮುಂದಾಗಿದ್ದರೂ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಅಡ್ಡಿ ಬಂದಿವೆ. ಸಮಾವೇಶದ ಮೂಲಕ ಕಾಂಗ್ರೆಸ್‌ನ ಈ ದಲಿತ ಮತ್ತು ಹಿಂದುಳಿದ ವರ್ಗಗಳ ವಿರೋಧಿ ಧೋರಣೆಯನ್ನು ಜನರಿಗೆ ತಿಳಿಸಲು ತೀರ್ಮಾನಿಸಲಾಗಿದೆ.
– ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next