Advertisement
ಖುದ್ದು ಸಚಿವ ಆನಂದ್ ಸಿಂಗ್ ಅವರು ಇಡೀ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಈಗಾಗಲೇ ನಗರದಾದ್ಯಂತ ಬಿಜೆಪಿ ಹಾಗೂ ಪಕ್ಷದ ನಾಯಕರ ಕಟೌಟ್‌ಗಳು ರಾರಾಜಿಸುತ್ತಿವೆ. ನಗರ ಪ್ರವೇಶಿಸುವ ಎಲ್ಲ ದಿಕ್ಕುಗಳ ರಸ್ತೆಗಳಲ್ಲೂ ಕೇಸರಿ ಕಂಬದ ಮೇಲೆ ಬಿಜೆಪಿ ಬಾವುಟ ಹಾರಾಡುತ್ತಿದೆ. ಚಿತ್ರದುರ್ಗದ ಮೂಲಕ ಹೊಸಪೇಟೆ ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿ 50ರ ಸುರಂಗ ಮಾರ್ಗದಿಂದ ಹಿಡಿದು ಕಮಲಾಪುರದ ಭುವನೇಶ್ವರಿ ಹೋಟೆಲ್ ಮಾರ್ಗದವರೆಗೂ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ಇನ್ನೊಂದೆಡೆ ಟಿಬಿಡ್ಯಾಂ, ಸಂಡೂರು ರಸ್ತೆ, ಬಳ್ಳಾರಿ ರಸ್ತೆ ಇಡೀ ನಗರವೇ ಕೇಸರಿಮಯವಾಗಿದೆ.
Related Articles
Advertisement
ಹಂಪಿ ಶ್ರೀವಿರೂಪಾಕ್ಷೇಶ್ವರ ಗೋಪುರ, ಕಲ್ಲಿನ ತೇರು, ಸಾಸಿವೆಕಾಳು ಗಣಪ, ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಆಂಜನೇಯ, ವಿಜಯ ವಿಠಲ ದೇಗುಲದ ಸಪ್ತಸ್ವರ ಹೊರಡಿಸುವ ಕಲ್ಲಿನ ಕಂಬಗಳು, ಉಗ್ರನರಸಿಂಹ ಸೇರಿದಂತೆ ವಿವಿಧ ಸ್ಮಾರಕಗಳ ಮಿಶ್ರಣದೊಂದಿಗೆ ವೇದಿಕೆ ಕಂಗೊಳಿಸುತ್ತಿದೆ. ಈ ಭವ್ಯ ಸಭಾಂಗಣದಲ್ಲಿ ಎರಡು ದ್ವಾರಗಳನ್ನು ನಿರ್ಮಿಸಲಾಗಿದ್ದು, ಪ್ರವೇಶದ್ವಾರದಲ್ಲೂ ಹಂಪಿ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಕಲಾ ಪ್ರಪಂಚ ಅನಾವರಣಗೊಂಡಿದೆ. ಕೇಂದ್ರ-ರಾಜ್ಯ ಸರಕಾರಗಳ ಸಾಧನೆಗಳನ್ನು ತಿಳಿಸುವ ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಗಳನ್ನೂ ತೆರೆಯಲಾಗಿದೆ.
ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಹಿರಿಯ ನಾಯಕ ಅಶ್ವಥ್ ನಾರಾಯಣ, ಸಚಿವರಾದ ಆನಂದಸಿಂಗ್ ಹಾಗೂ ಶಶಿಕಲಾ ಜೊಲ್ಲೆ, ವಿಭಾಗೀಯ ಸಹ ಪ್ರಭಾರಿ ಸಿದ್ದೇಶ್ ಯಾದವ್ ಸಿದ್ಧತೆಗಳನ್ನು ಪರಿಶೀಲಿಸಿದರು. ವಿಜಯನಗರದಲ್ಲಿ ಮೊದಲ ಬಾರಿಗೆ ರಾಜ್ಯ ಕಾರ್ಯಕಾರಿಣಿ ನಡೆಯುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಹಾಗೂ ರಾಜ್ಯ ಸಚಿವರು, ಪಕ್ಷದ ವರಿಷ್ಠರು ಭಾಗವಹಿಸಲಿದ್ದಾರೆ. – ಆನಂದ್ ಸಿಂಗ್, ಪ್ರವಾಸೋದ್ಯಮ ಸಚಿವರು
ವಿಜಯನಗರದಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. – ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವರು, ವಿಜಯನಗರ