Advertisement
ನವದೆಹಲಿ ಭಾಗದಲ್ಲಿ ಹಾಕಿರುವ ಪೋಸ್ಟರ್ ಒಂದರಲ್ಲಿ ಅಮಿತ್ ಶಾ, ನರೇಂದ್ರ ಮೋದಿ ಮತ್ತು ಇತರೇ ಬಿ.ಜೆ.ಪಿ. ಅಭ್ಯರ್ಥಿಗಳ ಭಾವಚಿತ್ರದ ಜೊತೆಗೆ ವೀರ ಯೋಧ ಅಭಿನಂದನ್ ಅವರ ಭಾವಚಿತ್ರವನ್ನೂ ಹಾಕಲಾಗಿದೆ. ಮಾತ್ರವಲ್ಲದೇ ‘ಮೋದಿ ಹೈ ತೋ ಮುಮ್ಕಿನ್ ಹೈ’ ‘ಮತ್ತು ನಮೋ ಅಗೈನ್’ ಎಂಬ ಬರಹಗಳನ್ನು ಬರೆಯಲಾಗಿದೆ.
ಭಾರತೀಯ ಸೇನೆ ಮತ್ತು ಇತ್ತೀಚೆಗೆ ಭಾರತೀಯ ವಾಯುಪಡೆ ಪಾಕ್ ಕೃಪಾಪೋಷಿತ ಉಗ್ರಗಾಮಿ ಶಿಬಿರಗಳ ಮೇಲೆ ನಡೆಸಿದ ವಾಯುದಾಳಿಗಳನ್ನು ಬಿ.ಜೆ.ಪಿ.ಯು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡಿದ್ದವು. ಇನ್ನು ತನ್ನ ಪೋಸ್ಟರ್ ಗಳಲ್ಲಿ ಅಭಿನಂದನ್ ಭಾವಚಿತ್ರವನ್ನು ಬಳಕೆ ಮಾಡಿರುವುದಕ್ಕೆ ಟ್ವಿಟ್ಟರಿಗರು ಗರಂ ಆಗಿದ್ದಾರೆ. ಮತ್ತು ಕೇಸರಿ ಪಕ್ಷದ ಈ ಕ್ರಮವನ್ನು ‘ನಾಚಿಕೆಗೇಡು’ ಎಂದು ಬಣ್ಣಿಸಿದ್ದಾರೆ.
ಇನ್ನು ಹಲವಾರು ಪತ್ರಕರ್ತರೂ ಸಹ ಬೆಳವಣಿಗೆಯನ್ನು ಖಂಡಿಸಿದ್ದಾರೆ. ಮತ್ತು ಇದರ ಕುರಿತಾಗಿರುವ ನೈತಿಕತೆ ಮತ್ತು ಕಾನೂನು ಅಂಶಗಳ ಕುರಿತಾಗಿಯೂ ಚರ್ಚೆ ನಡೆಯುತ್ತಿದೆ. ಈ ಕುರಿತಾಗಿ ಭಾರತೀಯ ವಾಯುಪಡೆಯು ತನ್ನ ಸ್ಟಷ್ಟನೆಯನ್ನು ನೀಡಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಇನ್ನು ಚಳುವಳಿಗಾರ ಯೋಗೇಂದ್ರ ಯಾದವ್ ಅವರು ಈ ಪೋಸ್ಟರ್ ಕುರಿತಾಗಿ ಭಾರತೀಯ ಚುನಾವಣಾ ಆಯೋಗದ ನಿಲುವೇನು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಹುದ್ದೆಯಲ್ಲಿರುವ ಯೋಧನೊಬ್ಬನ ಭಾವಚಿತ್ರವನ್ನು ಚುನಾವಣಾ ಪ್ರಚಾರದ ಉದ್ದೇಶಕ್ಕಾಗಿ ಬಳಸುವುದಕ್ಕೆ ಅನುಮತಿಯಿದೆಯೇ ಎಂದು ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಭಾರತೀಯ ಸೇನೆಯನ್ನು ಮತ್ತು ಅದರ ಚಟುವಟಿಕೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಪಡಿಸುವುದನ್ನು ನಿಲ್ಲಿಸುವಂತೆ ಸೇನೆಯ ನಿವೃತ್ತ ಅಧಿಕಾರಿ ಮೇಜರ್ ಡಿ.ಪಿ. ಸಿಂಗ್ ಅವರು ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
Related Articles
ಇನ್ನು ಬಿ.ಜೆ.ಪಿ.ಯ ಈ ಚುನಾವಣಾ ತಂತ್ರವನ್ನು ಕೆಲವು ಟ್ಟಿಟ್ಟರಿಗರು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ಮೋದಿಯವರಂತಹ ಸಮರ್ಥ ನಾಯಕತ್ವ ಇದ್ದ ಕಾರಣದಿಂದಲೇ ನಮ್ಮ ಸೇನೆಗೆ ವಾಯುದಾಳಿ ನಡೆಸಲು ಸಾಧ್ಯವಾಗಿದೆ, ಆದುದರಿಂದ ಇದರ ಲಾಭವನ್ನು ಬಿ.ಜೆ.ಪಿ. ಪಡೆದುಕೊಂಡರೆ ತಪ್ಪೇನು? ಎಂದು ಕೆಲವರು ಪ್ರತಿಪಾದಿಸಿದ್ದಾರೆ. ಒಟ್ಟಿನಲ್ಲಿ ಇತ್ತೀಚೆಗಿನ ಪುಲ್ವಾಮ ದಾಳಿ ಮತ್ತು ಆ ಬಳಿಕದ ಏರ್ ಸ್ಟ್ರೈಕ್ ವಿಷಯಗಳು ಇದೀಗ ವಿವಿಧ ಪಕ್ಷಗಳ ನಾಯಕರ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವುದಂತೂ ವಿಪರ್ಯಾಸವೇ ಸರಿ.
Advertisement