ಮೈಸೂರು: ಅಧಿಕಾರ ಬೇಕಂದ್ರೆ ಸಾಯೋಕೂ ಸಿದ್ಧರಿರಬೇಕು ಎಂಬ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಲು ಆಗ್ರಹಿಸಿದರು.
ನಗರದ ಗಾಂಧಿಚೌಕದಲ್ಲಿ ಪ್ರತಿಭಟನೆ ನಡೆಸಿದ ನಗರ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು, ಪ್ರಧಾನಿ ನರೇಂದ್ರಮೋದಿ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ವಾಹನಗಳಿಗೆ ಹಾಕಿಕೊಂಡಿರುವ ಕೆಂಪುದೀಪ ತೆಗೆಸಿ ವಿಐಪಿ ಸಂಸ್ಕೃತಿ ಹೋಗಲಾಡಿಸಲು ಯತ್ನಿಸಿದರೆ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಚಿವ ಬಸವರಾಜ ರಾಯರಡ್ಡಿ, “ಜೀವ ಬೆದರಿಕೆ ಇದ್ದರೆ ಸಾಯಲಿ ಬಿಡಿ, ಅಧಿಕಾರ ಬೇಕಾದರೆ ಸಾಯಬೇಕಪ್ಪ, ಯಾರೇನು ಮಾಡಬೇಕು ಅದಕ್ಕೆ, ಅಧಿಕಾರ ಬೇಡ ಅಂದರೆ ಮನೆಯಲ್ಲಿ ಕೂರಲಿ’ ಎಂದು ಪ್ರಧಾನಮಂತ್ರಿಯವರ ಬಗ್ಗೆ ಉಡಾಫೆಯ ಉತ್ತರ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರಮೋದಿ ಅವರು ಬಿಜೆಪಿ ನಾಯಕರು ಮಾತ್ರವಲ್ಲ. ಈ ದೇಶದ ಪ್ರಧಾನಿ ಎಂಬುದನ್ನು ಮರೆತು ಈ ರೀತಿಯ ಪದಗಳನ್ನು ಬಳಸಿರುವುದು, ಅದೂ ತಾವೊಬ್ಬ ಮಂತ್ರಿಯಾಗಿ ಉನ್ನತ ಶಿಕ್ಷಣದಂತಹ ಮಹತ್ವದ ಖಾತೆ ಯನ್ನು ಹೊಂದಿರುವವರು ನೀಡಿರುವ ಹೇಳಿಕೆ ವೈಯಕ್ತಿಕವಾಗಿ ತನಗೆ ಹಾಗೂ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂಬುದು ಅವರಿಗೆ ತಿಳಿದಿಲ್ಲ ಎನಿಸುತ್ತದೆ.
ಅವರ ಹೇಳಿಕೆಯನ್ನು ನೋಡಿದರೆ ಉನ್ನತ ಶಿಕ್ಷಣ ಸಚಿವರಿಗೇ ಮೊದಲು ಶಿಕ್ಷಣ, ಸಂಸ್ಕಾರ ಕೊಡಿಸಬೇಕಾದ ಅಗತ್ಯವಿದೆ. ಮುಖ್ಯಮಂತ್ರಿಯವರೇ ಐಪಿಎಸ್ ಅಧಿಕಾರಿಯೊಬ್ಬರನ್ನು ವೇದಿಕೆಯ ಮೇಲೆ ಕರೆಸಿಕೊಂಡು ಸಾರ್ವಜನಿಕವಾಗಿ ನಿಂದಿಸುತ್ತಾರೆ. ಹೀಗಿರುವಾಗ ಅವರ ಸಂಪುಟದ ಸಚಿವರಿಂದ ನಾವು ಇನ್ನೇನನ್ನು ನಿರೀಕ್ಷಿಸ ಬಹುದು ಎಂದು ಪ್ರತಿಭಟನಾಕಾರರು ಹರಿಹಾಯ್ದರು.
ಸಂಸದ ಪ್ರತಾಪ್ ಸಿಂಹ, ನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಕೆ.ಗೋಕುಲ್ ಗೋವರ್ಧನ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಸಂಪತ್, ಬಿ.ಸೋಮಶೇಖರ್,ದೇವರಾಜ್, ಕೆ.ಜೆ.ರಮೇಶ್, ಪರಶಿವಮೂರ್ತಿ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.