Advertisement

“ಸಿಎಂರನ್ನು ಮನೆಗೆ ಕಳಿಸುವವರೆಗೂ ಹೋರಾಟ’​​​​​​​

06:00 AM Nov 22, 2018 | Team Udayavani |

ಬೆಂಗಳೂರು:  “ಕೇವಲ 38 ಶಾಸಕರನ್ನು ಹೊಂದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಅಧಿಕಾರ ನಡೆಸುವ ನೈತಿಕತೆಯಿಲ್ಲ. ಅವರ ದುರಾಡಳಿತದ ವಿರುದ್ಧ ಹೋರಾಟ ಆರಂಭಿಸಲಾಗಿದ್ದು, ಅವರನ್ನು ಮನೆಗೆ ಕಳುಹಿಸುವವರೆಗೆ ಹೋರಾಟ ಮುಂದುವರಿಯಲಿದೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದಿರುವುದನ್ನು ಖಂಡಿಸಿ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬುಧವಾರ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

“ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಮಂಗಳವಾರ ಮುಖ್ಯಮಂತ್ರಿಯವರು ಇಡೀ ದಿನ ಸಭೆ ನಡೆಸಿದರೂ  ಸಮಸ್ಯೆ ಬಗೆಹರಿದಿಲ್ಲ. ರೈತರಿಗೆ ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಬೆಳಗಾವಿಗೆ ಹೋಗದೆ ದ್ರೋಹ ಬಗೆದಿದ್ದಾರೆ. ಆದರೂ ಧಿಮಾಕು ತೋರುತ್ತಿದ್ದಾರೆ. ಮಾತೆತ್ತಿದರೆ ರಾಜೀನಾಮೆ ಕೊಟ್ಟು ಹೋಗುತ್ತೀನಿ ಎನ್ನುತ್ತೀರಲ್ಲಾ? ರಾಜೀನಾಮೆ ಕೊಟ್ಟು ಹೋಗಿ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು 38 ಸ್ಥಾನ ಪಡೆದ ಜೆಡಿಎಸ್‌ಗೆ ಕಾಂಗ್ರೆಸ್‌ ಬೆಂಬಲ ನೀಡಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಈ ನಿರ್ಧಾರವೇ ರಾಜಕೀಯ ದು:ಸ್ಥಿತಿಗೆ ಕಾರಣ’ ಎಂದು ಕಿಡಿ ಕಾರಿದರು.

ಹೊಸ ಮುಖ್ಯಮಂತ್ರಿಗೆ ಅವಕಾಶ ನೀಡೋಣವೆಂದು ಐದು ತಿಂಗಳು ಸುಮ್ಮನಿದ್ದೆವು. ಇನ್ನು ಕಾಲಾವಕಾಶ ನೀಡುವುದಿಲ್ಲ. ಸರ್ಕಾರದ ವಿರುದ್ಧ ಹೋರಾಟಕ್ಕೆ ಚಾಲನೆ ನೀಡಲಾಗಿದ್ದು, ನಿಮ್ಮನ್ನು ಮನೆಗೆ ಕಳುಹಿಸುವವರೆಗೆ ಹೋರಾಟ ಮುಂದುವರಿಯಲಿದೆ. ರೈತ ಮಹಿಳೆ ಬಗ್ಗೆ ಹಗುರವಾಗಿ ಮಾತನಾಡಿದ ಮುಖ್ಯಮಂತ್ರಿ  ವಿರುದ್ಧ ಮಹಿಳೆಯರು ನಿರಂತರವಾಗಿ ಚಳವಳಿ ನಡೆಸಬೇಕು. ಹೋರಾಟಕ್ಕೆ ಮಣಿದು ರಾಜೀನಾಮೆ ನೀಡುವಂತಾಗಬೇಕು ಎಂದು ಕರೆ ನೀಡಿದರು.

ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಉದಯ್‌ ಗರುಡಾಚಾರ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್‌.ಸದಾಶಿವ, ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

ಕುಮಾರಸ್ವಾಮಿಗೆ ನೈತಿಕತೆ ಇಲ್ಲವೇ?
ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, “ದೇವೇಗೌಡ ಹಾಗೂ ಕುಮಾರಸ್ವಾಮಿಯವರಿಗೆ ಮೂರು ಪ್ರಶ್ನೆ ಕೇಳುತ್ತೇನೆ. ಮುಖ್ಯಮಂತ್ರಿಯಾದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದರು. ಆರು ತಿಂಗಳು ಕಳೆದರೂ ಒಬ್ಬರ ಸಾಲವೂ ಮನ್ನಾ ಆಗಿಲ್ಲ. ಬ್ಯಾಂಕ್‌ ಒಳಗೆ ಏನು ನಡೆಯುತ್ತಿದೆ ಗೊತ್ತಾಗುತ್ತಿಲ್ಲ. ಕೂಡಲೇ ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ದೇವೇಗೌಡರೇ, ತುರ್ತು ಪರಿಸ್ಥಿತಿ ವಿರೋಧಿಸಿ ಜೈಲಿಗೆ ಹೋಗಿದ್ದಿರಿ. ತುರ್ತು ಪರಿಸ್ಥಿತಿ ವಿರೋಧಿಸಿದ್ದ ಜಯಪ್ರಕಾಶ್‌ ನಾರಾಯಣ್‌ ಅವರ ಹೆಸರನ್ನೇ ಜೆಡಿಎಸ್‌ ಕಚೇರಿಗೆ ಇಟ್ಟಿದ್ದೀರಿ. ಹೀಗಿರುವಾಗ ಕಾಂಗ್ರೆಸ್‌ನ ರಾಹುಲ್‌ ಗಾಂಧಿಯವರೊಂದಿಗೆ ಹೇಗೆ ಸೇರಿದಿರಿ? ನಿಮ್ಮ ರಾಜಕೀಯ ಸಿದ್ಧಾಂತಕ್ಕೆ ತಿಲಾಂಜಲಿ ಹೇಳಿದ್ದೀರಾ?

ಕುಮಾರಸ್ವಾಮಿಯವರೇ, ರೈತ ಹೋರಾಟಗಾರ್ತಿ ಜಯಶ್ರೀಯನ್ನು ನಾಲ್ಕು ವರ್ಷ ಎಲ್ಲಿ ಮಲಗಿದ್ದಿರಿ ಎಂದು ಪ್ರಶ್ನಿಸಿದ್ದೀರಿ. ನಿಮಗೆ ನೈತಿಕತೆ ಇಲ್ಲವೇ? ನಿಮ್ಮ ಆಂಗಿಕ ಭಾವ (ಬಾಡಿ ಲ್ಯಾಂಗ್ವೇಜ್‌) ಹಾಗೂ ಶಬ್ಧ ಸಂಸ್ಕೃತಿ ಪರೋಕ್ಷವಾಗಿ ಮೀ ಟೂ ಆಂದೋಲನದ ವ್ಯಾಪ್ತಿಗೆ ಬರುವುದಿಲ್ಲವೇ? ಈ ರೀತಿಯ ಮಾತುಗಳನ್ನಾಡಲು ನಾಚಿಕೆಯಾಗಬೇಕು ಎಂದು ಕಿಡಿ ಕಾರಿದರು. ರೈತರನ್ನು ಗೂಂಡಾಗಳು, ದರೋಡೆಕೋರರೆಂದು ಮುಖ್ಯಮಂತ್ರಿಗಳು ಕರೆದಿದ್ದಾರೆ. ರೈತರು ಗೂಂಡಾಗಳಾಗಿದ್ದರೆ ಇಂದು ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ನಾವು, ನೀವು ಯಾರೂ ಇರುತ್ತಿರಲಿಲ್ಲ. ರಾಜ್ಯದಲ್ಲಿ ಪ್ರಾಮಾಣಿಕರಾದ ರೈತರನ್ನು ಗೂಂಡಾಗಳೆಂದು ಕರೆದ ನಿಮಗೆ ನಾಚಿಕೆಯಾಗಬೇಕು ಎಂದು ಹೇಳಿದರು.

ಸುವರ್ಣಸೌಧದ ಗೇಟಿನ ಬೀಗ ಒಡೆದಿದ್ದಕ್ಕೆ ಗೂಂಡಾ ಎನ್ನುತ್ತೀರಿ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಗೆ ವಿಧಾನಸೌಧದ ಮುಂದೆ ಚಪ್ಪಲಿಯಲ್ಲಿ ಹೊಡೆಸಿ, ವಿಧಾನಸೌಧಕ್ಕೆ ಕಲ್ಲು ತೂರಿದವರಿಗೆ ಏನು ಹೇಳಬೇಕು. ಸದನದ ಬಾಗಿಲನ್ನು ಕಾಲಿನಿಂದ ಒದ್ದ ಸಿದ್ದರಾಮಯ್ಯಗೆ ಏನೆಂದು ಹೇಳಬೇಕು. ಅಂಹಕಾರ, ದರ್ಪ ಹೆಚ್ಚು ದಿನ ಉಳಿಯುವುದಿಲ್ಲ.
– ಆರ್‌.ಅಶೋಕ್‌, ಮಾಜಿ ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next