ಬೆಂಗಳೂರು : ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣಗೋಪಾಲ್ ಮೇಲೆ ಮಹಿಳಾ ದೌರ್ಜನ್ಯದ ಆರೋಪ ಇದೆ. ಹೀಗಾಗಿ ಅವರು ಕರ್ನಾಟಕಕ್ಕೆ ಬರಕೂಡದು. ಅವರನ್ನು ರಾಜ್ಯದಿಂದ ವಾಪಾಸ್ ಕಳುಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಸಚಿವರ ಮೇಲೆ ಆರೋಪ ಬಂದಾಗಲೂ ಸಿಐಡಿ ತನಿಖೆ ಮೂಲಕ ಕ್ಲೀನ್ ಚಿಟ್ ನೀಡಲಾಗುತ್ತಿದೆ. ಮಾಜಿ ಸಚಿವ ಮೇಟಿ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪ ಬಂದಿತ್ತಾದರೂ, ಸಿಐಡಿ ಮೂಲಕ ಕ್ಲೀನ್ ಚಿಟ್ ನೀಡಿದ್ದಾರೆ. ಸಚಿವ ಕೆ.ಜೆ.ಜಾರ್ಜ್ ಮೇಲಿನ ಆರೋಪ ಸಹ ಮುಕ್ತ ಮಾಡಿದ್ದಾರೆ. ಈಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಕೂಡ ಮಹಿಳಾ ದೌರ್ಜನ್ಯದ ಆರೋಪ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ವೇಣಗೋಪಾಲ್ ಅವರು ರಾಜ್ಯಕ್ಕೆ ಬರಕೂಡದು. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿಯೇ ಮುಂದುವರಿದರೆ ಉಗ್ರ ಹೋರಾಟ ಮಾಡಲಿದ್ದೇವೆ. ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸುರಕ್ಷತೆ ನೀಡಲು ಸಾಧ್ಯವಾಗುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಾಜಿ ಸಚಿವ ಪರಮೇಶ್ವರ್ ನಾಯ್ಕ ಕಿರುಕುಳದಿಂದ ಡಿವೈಎಸ್‌ಪಿ ಅನುಪಮಾ ಶೆಣೈ ರಾಜೀನಾಮೆ ನೀಡಿದ್ದಾರೆ. ಹಲವರು ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರವನ್ನು ನಿಯಂತ್ರಿಸಲು ಬಂದಿರುವ ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಸರೀತ ನಾಯರ್ ಪತ್ರ ಬರೆದಿದ್ದಾರೆ. ಸೋಲಾರ್ ಅನುಮತಿ ನೀಡುವಾಗ ಅವರನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ವೇಣುಗೋಪಾಲ್ ವಿರುದ್ಧ ಬಿಜೆಪಿ ಹೋರಾಟ ಸಾಂಕೇತಿಕವಲ್ಲ. ದೆಹಲಿಯ ನಾಯಕರನ್ನು ಮುಟ್ಟುವ ವರೆಗೂ ಹೋರಾಟ ಮಾಡಲಿದ್ದೇವೆ ಎಂದರು.
ವೇಣುಗೋಪಾಲ್‌ರನ್ನು ವಾಪಾಸ್ ಕರೆಸಿಕೊಳ್ಳುವವರೆಗೂ ಹೋರಾಟ ನಿಲ್ಲುವುದಿಲ್ಲ. ವೇಣುಗೋಪಾಲ್ ಅವರ ಕೇರಳ ಬುದ್ಧ ಇಲ್ಲಿ ನಡೆಯುವುದಿಲ್ಲ. ಅವರು ಕರ್ನಾಟಕಕ್ಕೆ ಬಂದರೆ, ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲಿದ್ದೇವೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ಬೀದಿ ನಾಟಕ ಮಾಡಲು ಹೊರಟಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ವೇಣುಗೋಪಾಲ್ ಕರ್ನಾಟಕಕ್ಕೆ ಬರುವುದನ್ನು ತಡೆಗಟ್ಟಿ ಎಂದು ಸವಾಲು ಹಾಕಿದರು.
ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ನಗರ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಾರದಾ ನಾಯಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತಾ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.