Advertisement

ಅತ್ಯಾಚಾರ, ಕೊಲೆ ಖಂಡಿಸಿ ಬಿಜೆಪಿ ಪ್ರತಿಭಟನೆ

07:40 AM Dec 23, 2017 | |

ಬೆಂಗಳೂರು: ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಖಂಡಿಸಿ ಶುಕ್ರವಾರ ಬೃಹತ್‌ ಪ್ರತಿಭಟನೆ
ಹಮ್ಮಿಕೊಂಡಿದ್ದ ಬಿಜೆಪಿ ಬೆಂಗಳೂರು ಘಟಕ ಹಾಗೂ ಮಹಿಳಾ ಮೋರ್ಚಾ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.

Advertisement

ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೆ, ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯಾದ್ಯಂತ ಕೊಲೆ, ಅತ್ಯಾಚಾರ ಮತ್ತಿತರ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರಿಗೆ ಮುಕ್ತ ಅವಕಾಶ ನೀಡದ ಸರ್ಕಾರ ದುಷ್ಕರ್ಮಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಅತ್ಯಾಚಾರ, ಕೊಲೆಗಳಲ್ಲೂ ರಾಜ್ಯ ನಂ.1: ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಂ.1 ರಾಜ್ಯ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇದೀಗ ಅತ್ಯಾಚಾರ, ಕೊಲೆಗಳಲ್ಲೂ ನಂ. 1 ರಾಜ್ಯವಾಗುವತ್ತ ಹೊರಟಿದೆ ಎಂದು ಕಿಡಿ ಕಾರಿದರು.

ವಿಜಯಪುರ ಘಟನೆ ರಾಜ್ಯದ ಜನ ತಲೆತಗ್ಗಿಸುವ ವಿಚಾರ. ಒಬ್ಬ ದಲಿತ ಹೆಣ್ಣುಮಗಳನ್ನು ನಾಲ್ಕೈದು ಮಂದಿ ಬೈಕ್‌ನಲ್ಲಿ ಬಂದು ಬಲವಂತವಾಗಿ ಶಾಲೆ ಬಳಿಯಿಂದ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡುತ್ತಾರೆ ಎಂದರೆ, ರಾಜ್ಯದಲ್ಲಿ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದರು.

Advertisement

ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿರುವಾಗಲೇ ವಿಜಯಪುರದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ
ಮಾಡಲಾಗಿದೆ ಎಂದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿಯಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದರು.

ರಾಜ್ಯದಲ್ಲಿ ಇಷ್ಟೆಲ್ಲಾ ಅನಾಹುತ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಹೇಳುತ್ತಾರೆ. ಈ ಸರ್ಕಾರಕ್ಕೆ ಮಾನ- ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ ಅಶೋಕ್‌, ಮುಖ್ಯಮಂತ್ರಿ ಮತ್ತು ಗೃಹ
ಸಚಿವರು ಇನ್ನಾದರೂ ಎಚ್ಚೆತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಚಿ.ನಾ.ರಾಮು, ಪಕ್ಷದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next