Advertisement

ಡಿ.10ರಂದು ಬಿಜೆಪಿ ಬೃಹತ್‌ ಪ್ರತಿಭಟನೆ

06:00 AM Nov 30, 2018 | |

ಬೆಂಗಳೂರು: ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ಆಡಳಿತ ವೈಫ‌ಲ್ಯಗಳ ವಿರುದ್ಧ ಡಿ.10ರಂದು ಬೆಳಗಾವಿಯ ಸುವರ್ಣಸೌಧದ ಮುಂಭಾಗ ಬೃಹತ್‌ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.

Advertisement

ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆ ಹಾಗೂ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಡಿ.10ರಂದು ಮಧ್ಯಾಹ್ನ 1 ಗಂಟೆಗೆ ಬೆಳಗಾವಿಯ ಸುವರ್ಣಸೌಧದ ಮುಂಭಾಗ ಹಿಂದೆ ಅನುಮತಿ ನೀಡಿದ ಜಾಗದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ. ಸಾಲ ಮನ್ನಾದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಬರದಿಂದಾಗಿ ರೈತರು ತತ್ತರಿಸುತ್ತಿದ್ದಾರೆ. ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಹಾಗೂ ಆಡಳಿತ ವೈಫ‌ಲ್ಯದ ವಿರುದ್ಧ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ ಸೇರಿ ಮುಂಬೈ ಕರ್ನಾಟಕ ಭಾಗದಿಂದ ರೈತರನ್ನು ಒಟ್ಟುಗೂಡಿಸಿ ಬೃಹತ್‌ ರ್ಯಾಲಿ ನಡೆಸಲಾಗುವುದು. ರಾಜ್ಯದ ಇತರ ಭಾಗಗಳಿಂದಲೂ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಉಪ ಚುನಾವಣೆ ಕುರಿತು ಸಿಂಹಾವಲೋಕನ:
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಐದು ಕ್ಷೇತ್ರಗಳ ಉಪಚುನಾವಣೆ ಹಾಗೂ ಫ‌ಲಿತಾಂಶ ಕುರಿತಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಂಹಾವಲೋಕನ ನಡೆಯಿತು. ಪಕ್ಷದಿಂದಾಗಿರುವ ಕೆಲ ಲೋಪಗಳ ಬಗ್ಗೆಯೂ ಚರ್ಚೆ ನಡೆಯಿತು. ಆಡಳಿತಾರೂಢ ಮೈತ್ರಿ ಪಕ್ಷ ಉಪ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಿ ಗೆದ್ದಿರುವ ವಿಚಾರವೂ ಪ್ರಸ್ತಾಪವಾಯಿತು ಎಂದು ತಿಳಿಸಿದರು.

ಕಳೆದ ಉಪ ಚುನಾವಣೆಯಲ್ಲಿ ಜಾತಿ ರಾಜಕಾರಣ ತೀವ್ರವಾಗಿತ್ತು. ಆಡಳಿತ ಪಕ್ಷ ಅದನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದೆ. ತಳಮಟ್ಟದಲ್ಲಿ ಕಾರ್ಯಕರ್ತರ ಪಡೆ ಹೊಂದಿರುವ ಪಕ್ಷಕ್ಕೆ ಸಂಘಟನೆಯಲ್ಲಿ ಕೊರತೆಗಳು ಫ‌ಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಭಾವನೆ ಕೆಲ ಮುಖಂಡರಲ್ಲಿತ್ತು. ಆ ರೀತಿಯ ಮನೋಭಾವ ಸರಿಯಲ್ಲ ಎಂಬ ಎಚ್ಚರಿಕೆಯ ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು ಎಂದು ಹೇಳಿದರು.

Advertisement

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಡಿ.10ರಿಂದ ಆರಂಭವಾಗುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಪ್ರಧಾನವಾಗಿ ಯಾವ ವಿಚಾರಗಳನ್ನು ಪ್ರಸ್ತಾಪಿಸಬೇಕೆಂಬ ಬಗ್ಗೆ ಚರ್ಚಿಸಲಾಯಿತು. ಡಿ.11ರಿಂದ ಸಂಸತ್‌ ಅಧಿವೇಶನ ಕೂಡ ಆರಂಭವಾಗಲಿದ್ದು, ಅಲ್ಲಿ ರಾಜ್ಯದ ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪ ಮಾಡಬೇಕೆಂಬ ಬಗ್ಗೆ ಸಂಸದರು, ಶಾಸಕರು ಚರ್ಚಿಸಿದ್ದಾರೆ. ಒಟ್ಟಾರೆ ಸಂಸತ್ತು ಹಾಗೂ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಹಾಗೂ ಜನರ ಕಲ್ಯಾಣಕ್ಕೆ ಅಗತ್ಯವಾದ ವಿಚಾರಗಳ ಬಗ್ಗೆ ಪಕ್ಷದ ಸಂಸದರು, ಶಾಸಕರು ದನಿ ಎತ್ತಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next