ಚಿಕ್ಕಬಳ್ಳಾಪುರ : ಡಾ.ಬಿ.ಆರ್.ಅಂಬೇಡ್ಕರ್, ನಾಡಪ್ರಭು ಕೆಂಪೇಗೌಡ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಗಲಾಟೆ ಮಾಡಿ ಶ್ರೇಷ್ಠರಿಗೆ ಅವಮಾನ ಮಾಡಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ರವಿ ವಿರುದ್ಧ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಮನಗರ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಎದುರಲ್ಲೇ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ರವಿ ಸಚಿವ ಡಾ.ಅಶ್ವತ್ಥನಾರಾಯಣ ಮೇಲೆ ಏರು ಧ್ವನಿಯಲ್ಲಿ
ಮಾತನಾಡಿದ್ದೂ ಅಲ್ಲದೆ, ಮೈಕ್ ಕಸಿದು, ತಳ್ಳಾಟ ನಡೆಸಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಮತ್ತು ಎಂಎಲ್ಸಿ ಧೋರಣೆ ಮತ್ತು ವರ್ತನೆಯಿಂದ ಕಾಂಗ್ರೆಸ್ ಪಕ್ಷದ ನಿಜವಾದ ಸಂಸ್ಕೃತಿ ಬಯಲಾಗಿದೆ ಎಂದು ದೂರಿದರು.
ಕಾನೂನು ಕ್ರಮಕ್ಕೆ ಆಗ್ರಹ : ರಾಜ್ಯ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಬಳುವನಹಳ್ಳಿ ಲೋಕೇಶ್‌ಗೌಡ ಮಾತನಾಡಿ, ರಾಮನಗರದಲ್ಲಿ ಅಭಿವೃದ್ಧಿ ಪರ್ವ ಕಾರ್ಯಕ್ರಮ ಮಾಡಲಾಗಿತ್ತು, ಶಿಷ್ಠಾಚಾರದ ಪ್ರಕಾರ ಕಾರ್ಯಕ್ರಮ ನಡೆಸಲಾಗಿದೆ. ಆದರೂ, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಂಸದ ಡಿ.ಕೆ.ಸುರೇಶ್ ಮತ್ತು ಎಂ.ಎಲ್.ಸಿ ರವಿ ಸಂವಿಧಾನ ವಿರೋಧಿ ವರ್ತನೆ ತೋರಿಸಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಇವರಿಬ್ಬರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಜನತೆ ತಕ್ಕ ಪಾಠ ಕಲಿಸುತ್ತಾರೆ: ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಕಾಂಗ್ರೆಸ್ ಸಂಸದರಿಗೆ ಕೆಚ್ಚು ಇದ್ದರೆ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಿ. ಅದು ಬಿಟ್ಟು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೂಂಡಾಗಳಂತೆ ವರ್ತಿಸಿರುವುದು ಕೇವಲ ರಾಮನಗರ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯದ ಜನರು ನೋಡಿದ್ದಾರೆ. ದೌರ್ಜನ್ಯ ಮತ್ತು ದಬ್ಟಾಳಿಕೆಯನ್ನು ರಾಜ್ಯದ ಜನರು ಸಹಿಸಿಕೊಳ್ಳುವುದಿಲ್ಲ. ಮುಂಬರುವ ದಿನಗಳಲ್ಲಿ ಗೂಂಡಾವರ್ತನೆ ಮಾಡಿರುವ ಕಾಂಗ್ರೆಸ್ ಸಂಸದರು ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಚಿಕ್ಕಬಳ್ಳಾಪುರ ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ಹಿರಿಯ ಮುಖಂಡ ಲಕ್ಷ್ಮೀನಾರಾಯಣ ಗುಪ್ತ, ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅಭಿಷೇಕ್, ಪ್ರಧಾನ
ಕಾರ್ಯದರ್ಶಿ ಆನೆಮಡುಗು ರಂಜಿತ್, ಉಪಾಧ್ಯಕ್ಷ ಹರೀಶ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ನರ್ಮದಾರೆಡ್ಡಿ, ಶಿಡ್ಲಘಟ್ಟ
ನಗರಾಭಿವೃದ್ಧಿ ಯೋಜನಾ ಪ್ರಾಧಿ ಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಸುಜಾತಮ್ಮ, ಶಿಡ್ಲಘಟ್ಟ ಯುವ ಮೋರ್ಚಾಧ್ಯಕ್ಷ ಭರತ್, ಗ್ರಾಮಾಂತರ ಮೋರ್ಚಾಧ್ಯಕ್ಷ
ನಾಗಾರ್ಜುನ, ಒಬಿಸಿ ಮೋರ್ಚಾದ ಆಂಜನೇಯಗೌಡ, ಜಿಲ್ಲಾ ಬಿಜೆಪಿ ರೈತ ಮೋರ್ಚಾಧ್ಯಕ್ಷ ರಾಜಶೇಖರ್ ಉಪಸ್ಥಿತರಿದ್ದರು.