Advertisement

BJP: ಕೈ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

09:05 PM Sep 08, 2023 | Team Udayavani |

ಬೆಂಗಳೂರು: ಗ್ಯಾರಂಟಿ ಯೋಜನೆ ಜಾರಿಗಾಗಿ ಎಸ್‌ಸಿಪಿ, ಟಿಎಸ್‌ಪಿ ಹಣ ಬಳಕೆೆ, ರಾಜ್ಯದ ರೈತರ ಹಿತ ಬಲಿಕೊಟ್ಟು ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದು, ವಿದ್ಯಾನಿಧಿ ಯೋಜನೆ ರದ್ದತಿ, ಕಾಸಿಗಾಗಿ ಪೋಸ್ಟಿಂಗ್‌ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಫ‌ಲ್ಯದ ವಿರುದ್ಧ ಬಿಜೆಪಿ ಹೋರಾಟದ ಅಖಾಡಕ್ಕೆ ಧುಮುಕಿದೆ.

Advertisement

ನೂರು ದಿನ ಪೂರೈಸಿದರೂ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದೇ ಬೆಂಗಳೂರಿಗರ ತೆರಿಗೆ ಹಣ ದುರ್ಬಳಕೆ ಮಾಡುತ್ತಿರುವುದರ ವಿರುದ್ಧ ಬಿಜೆಪಿ ನಾಯಕರು ಬೀದಿ ಹೋರಾಟಕ್ಕಿಳಿದಿದ್ದಾರೆ. ಆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಬಿಜೆಪಿ ಶಾಸಕರು, ಮುಖಂಡರು ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದ ಗೌಡ, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಗೋಪಾಲಯ್ಯ, ಮುನಿರತ್ನ, ಭೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರವಿ ಸುಬ್ರಮಣ್ಯ, ಎಸ್‌.ಆರ್‌.ವಿಶ್ವನಾಥ್‌ , ಮುನಿರಾಜು, ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌, ಸಂಸದ ಪಿ.ಸಿ.ಮೋಹನ್‌ ಸೇರಿ ಬಿಜೆಪಿ ಮಾಜಿ ಮೇಯರ್‌ಗಳು, ಪಾಲಿಕೆ ಮಾಜಿ ಸದಸ್ಯರು ಪಾಲ್ಗೊಂಡಿದ್ದರು.

ಕುಮಾರ ಕೃಪಾದಲ್ಲಿ ದಂಧೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಅನ್ನಭಾಗ್ಯದ ಹೆಸರಿನಲ್ಲಿ ಜನರಿಗೆ ಮೋಸ ಮಾಡಿರುವ ಸರ್ಕಾರ ಇದೀಗ ಕರ್ನಾಟಕವನ್ನು ಕತ್ತಲೆಗೆ ತಳ್ಳಿದೆ. ವಿಧಾನಸೌಧ ಮತ್ತು ಕುಮಾರ ಕೃಪಾದಲ್ಲಿ ದಂಧೆ ನಡೆಯುತ್ತಿದೆ. ಬೆಂಗಳೂರಿನ ಆಯಕಟ್ಟಿನ ಪ್ರದೇಶಗಳಲ್ಲಿ ಅಧಿಕಾರಿಗಳಿಗೆ ಪೋಸ್ಟಿಂಗ್‌ ನೀಡಲು ಲಕ್ಷಾಂತರ ರೂ. ಪಡೆಯಲಾಗುತ್ತಿದೆ. ಹಾಡಹಗಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಾಗ್ಧಾಳಿ ನಡೆಸಿದರು.

ಡೆಡ್‌ ಸ್ಟೋರೆಜ್‌ ಬಗ್ಗೆ ಮಾಹಿತಿ ನೀಡಿಲ್ಲ: ಮಾಜಿ ಸಿಎಂ ಸದಾನಂದಗೌಡ ಮಾತನಾಡಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಕಾವೇರಿ ನದಿ ನೀರು ಪ್ರಾಧಿಕಾರಕ್ಕೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫ‌ಲವಾಗಿದೆ. ತಮಿಳುನಾಡಿನ ವಿವಿಧ ಅಣೆಕಟ್ಟುಗಳಲ್ಲಿ ನೀರು ಸಂಗ್ರಹವಾಗಿದ್ದು ಡೆಡ್‌ ಸ್ಟೋರೆಜ್‌ಗಳ ಬಗ್ಗೆ ಬೆಳಕು ಚೆಲ್ಲಲಿಲ್ಲ ಎಂದು ದೂರಿದರು.

Advertisement

ದಲಿತ ವಿರೋಧಿ ಸರ್ಕಾರ: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸಿದೆ. ದೀನದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಉಚಿತ ಯೋಜನೆಗಳಿಗೆ ಬಳಕೆ ಮಾಡುತ್ತಿದೆ ಎಂದು ವಾಗ್ಧಾಳಿ ನಡೆಸಿದರು.

ಕಾವೇರಿ ಹೋರಾಟದಲ್ಲಿ ಬೆಂಗಳೂರಿಗರು ಭಾಗವಹಿಸಿ
ಕೇಂದ್ರದಲ್ಲಿ ಮೈತ್ರಿ ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಕಾಂಗ್ರೆಸ್‌ ಸರ್ಕಾರ ರಾಜ್ಯದ ರೈತರ ಹಿತ ಬಲಿತೆಗೆದುಕೊಳ್ಳಲು ಹೊರಟಿದೆ. ಮೇಕೆದಾಟು ಯೋಜನೆ ಜಾರಿಗಾಗಿ ಹೋರಾಟ ಮಾಡಿದವರು ಈಗ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಬೆಂಗಳೂರಿನ 1.5 ಕೋಟಿ ಜನರು ಕಾವೇರಿ ನೀರು ಕುಡಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ಹೋರಾಟದಲ್ಲಿ ಬೆಂಗಳೂರಿಗರು ಭಾಗವಹಿಸುವಂತೆ ಶಾಸಕ ಹಾಗೂ ಮಾಜಿ ಡಿಸಿಎಂ ಆರ್‌.ಅಶೋಕ್‌ ಕರೆ ನೀಡಿದರು.

ಈ ಸರ್ಕಾರದ ಹನಿಮೂನ್‌ ಪಿರಿಯಡ್‌ ಮುಗಿದಿದೆ. ಸರ್ಕಾರ ನುಡಿದಂತೆ ನಡೆದಿಲ್ಲ. ಗ್ಯಾರಂಟಿಗಳಿಗೆ ಷರತ್ತು ಹಾಕಿ ಜನರ ಕಿವಿಗೆ ಹೂ ಇಟ್ಟರು. ಗೃಹಲಕ್ಷಿ$¾ಯೋಜನೆಯಲ್ಲಿ ಮೆಸೇಜ್‌ ಬಂದಿದೆ. ಅಕೌಂಟ್‌ಗೆ ಹಣ ಬಂದಿಲ್ಲ.
– ಎಸ್‌.ಆರ್‌. ವಿಶ್ವನಾಥ್‌, ಶಾಸಕ

ರಾಜ್ಯದ ರೈತರು ಈಗ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ರಾಜ್ಯದ ಅನ್ನದಾತರ ಬಗ್ಗೆ ಸರ್ಕಾರ ಕಾಳಜಿ ತೋರುತ್ತಿಲ್ಲ. ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ.
– ಗೋಪಾಲಯ್ಯ, ಶಾಸಕ

ಸರ್ಕಾರದಲ್ಲಿ ಬಿಡಿಗಾಸೂ ಇಲ್ಲ. ಸರ್ಕಾರಿ ನೌಕರರಿಗೂ ವೇತನ ಪಾವತಿಸಿಲ್ಲ. ಪ.ಜಾತಿ/ಪಂಗಡದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರ್ಬಳಕೆ ಮಾಡಿಕೊಂಡಿದೆ.
-ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ಸದಸ್ಯ

ಬೆಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ದೊಡ್ಡ ದೊಡ್ಡ ಐಟಿ-ಬಿಟಿ ಸಂಸ್ಥೆಗಳು ಹೊರ ರಾಜ್ಯಗಳತ್ತ ಮುಖ ಮಾಡಿವೆ. ಶೇ.70ರಷ್ಟು ಕೂಲಿ ಕಾರ್ಮಿಕರು ಕೂಡ ವಲಸೆ ಹೋಗಲಾರಂಭಿಸಿದ್ದಾರೆ.
– ಮುನಿರತ್ನ, ಮಾಜಿ ಸಚಿವ

16ರಂದು ಕುರುಡುಮಲೆಯಿಂದ ಹೋರಾಟ
ಬೆಂಗಳೂರು: ಕಾಂಗ್ರೆಸ್‌ ಆಡಳಿತದ ವಿರುದ್ಧ ಮೈಕೊಡವಿರುವ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ರಾಜ್ಯವ್ಯಾಪಿ ಹೋರಾಟದ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. ಕೋಲಾರದ ಮುಳಬಾಗಿಲಿನ ಪುರಾಣ ಪ್ರಸಿದ್ಧ ಕುರುಡುಮಲೆ ವಿನಾಯಕನ ಸನ್ನಿಧಾನದಲ್ಲಿ ಸೆ.16ರಂದು ರಾಜ್ಯ ಸರ್ಕಾರದ ವಿರುದ್ಧ ಯಡಿಯೂರಪ್ಪ ಅವರ ಹೋರಾಟದ ಅಭಿಯಾನ ಆರಂಭವಾಗಲಿದೆ. ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಫ‌ಲ್ಯದ ವಿರುದ್ಧ ಗುಡುಗಿದರು. ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ತೊಲಗಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂಬ ಎಚ್ಚರಿಕೆ ಸಂದೇಶ ರವಾನಿಸಿದರು. ಪ್ರತಿ ಜಿಲ್ಲೆಯಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಯಲಿದೆ. ಸ್ಥಳೀಯ ಮುಖಂಡರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು.

ವಿದ್ಯುತ್‌ ಪೂರೈಸುವ ವಿಚಾರದಲ್ಲೂ ಕಣ್ಣಾಮುಚ್ಚಾಲೆ ಆಟವಾಡುತ್ತಿರುವ ಸರ್ಕಾರ ವಿದ್ಯುತ್‌ ಬಿಲ್‌ ಕೂಡ ದ್ವಿಗುಣ ಮಾಡಿದೆ. ವಿದ್ಯುತ್‌ ದರವನ್ನು ಏಕಾಏಕಿ ಎರಡು ಪಟ್ಟು ಹೆಚ್ಚಿಸಿದೆ. ಒಂದು ಕಡೆ ಉಚಿತ ಎಂದು ಹೇಳಿ ಮತ್ತೂಂದು ಕಡೆ ಜನರ ಜೀವನದ ನಡುವೆ ಚೆಲ್ಲಾಟವಾಡುತ್ತಿದೆ. ಇದನ್ನು ಖಂಡಿಸಿ ರಾಜ್ಯದ ಉದ್ದಗಲಕ್ಕೂ ಹೋರಾಟ ನಡೆಸಲಾಗುವುದು ಎಂದರು.

ನೀರು ಬಿಡದಿರುವ ನಿಲುವಿಗೆ ಸರ್ಕಾರ ಬದ್ಧವಾಗಿರಲಿ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಂಡ್ಯ: ತಮಿಳುನಾಡಿಗೆ ನೀರು ನಿಲ್ಲಿಸಿರುವ ರಾಜ್ಯ ಸರ್ಕಾರ ಮುಂದೆಯೂ ನೀರು ಬಿಡುವುದಿಲ್ಲ ಎಂಬ ನಿಲುವಿಗೆ ಬದ್ಧವಾಗಿರಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಆಗಮಿಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ಕಾವೇರಿಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಸೆ.12ರಿಂದ ನೀರು ಹರಿಸಲು ಸಾಧ್ಯವಿಲ್ಲ ಎಂದು ಪ್ರಾ ಧಿಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದು, ಆ ನಿಲುವಿಗೆ ಸರ್ಕಾರ ಸಂಪೂರ್ಣ ಬದ್ಧವಾಗಿರಬೇಕು ಎಂದರು.

ಕಾವೇರಿ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಬಿಜೆಪಿ ಸಂಸದರಿಗೆ ಸೂಚಿಸಲಾಗಿದೆ. ಅವರು ರಾಜ್ಯದ ರೈತರ ಹಿತ ಕಾಪಾಡಲು ಮುಂದಾಗಲಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ನಿರಂತರ ಹೋರಾಟ ನಡೆಸಲು ಬಿಜೆಪಿ ಸಿದ್ಧವಿದೆ. ಶಾಶ್ವತ ಪರಿಹಾರ ರೂಪಿಸುವ ಯೋಜನೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಮೇಕೆದಾಟು ವಿಚಾರದಲ್ಲಿ ತ್ವರಿತ ಕ್ರಮ ಅಗತ್ಯವಾಗಿದೆ ಎಂದು ತಿಳಿಸಿದರು.

ರೈತರ ಪರ ದನಿ ಎತ್ತಿ ಹೋರಾಡುತ್ತಿರುವ ರೈತ ಹಿತರಕ್ಷಣಾ ಸಮಿತಿಗೆ ಸಹಕಾರ ನೀಡುತ್ತೇವೆ. ಅಧಿಕಾರದಲ್ಲಿ ಇದ್ದಾಗಲೂ ರೈತರ ಬೇಡಿಕೆಗೆ ಸ್ಪಂದಿಸಿದ್ದೇವೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು. ಮಾಚಿ ಸಚಿವರಾದ ಆರ್‌.ಅಶೋಕ್‌, ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್‌ ಸೇರಿದಂತೆ ಮತ್ತಿತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next