ಕಾಪು: ವಕ್ಪ್ ನಿಯಮಾವಳಿ ಹೆಸರಿನಲ್ಲಿ ರಾಜ್ಯ ಸರಕಾರ ರೈತರ, ದಲಿತರ, ಮಠ ದೇವಸ್ಥಾನಗಳ ಆಸ್ತಿ ಕಬಳಿಕೆ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕಾಪು ಮಂಡಲ ಬಿಜೆಪಿ ವತಿಯಿಂದ ನ. ೬ರಂದು ಕಾಪು ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ರಾಜ್ಯ ಸರಕಾರ ವಕ್ಪ್ ಮಂಡಳಿ ಮೂಲಕವಾಗಿ ವಿವಿಧ ಜಿಲ್ಲೆಗಳಲ್ಲಿ ಮಠ, ಮಂದಿರ, ದೇವಸ್ಥಾನ ಸಹಿತವಾಗಿ ಜನರ ಆಸ್ತಿಯನ್ನು ವಕ್ಪ್ ಆಸ್ತಿಯೆಂದು ನಮೂದಿಸಿ ನೊಟೀಸ್ ನೀಡಿದೆ. ಇದರಲ್ಲಿ ಆಗಿರುವ ಅಪಚಾರ, ತಪ್ಪುಗಳನ್ನು ಸರಕಾರ ಕೂಡಲೇ ಸರಿಪಡಿಸಬೇಕಿದೆ. ಈ ಮಾದರಿಯ ಲ್ಯಾಂಡ್ ಜೆಹಾದಿ ಮಾಫಿಯಾವು ಕಾಪು ಕ್ಷೇತ್ರಕ್ಕೂ ಕಾಲಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗ ಬೇಕಿದೆ. ಮತ್ತು ಜನರ ಅನುಕೂಲಕ್ಕಾಗಿ ತಾಲೂಕು ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆದು ಆರ್ಟಿಸಿ ಪರಿಶೀಲನೆಗೆ ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದರು.
ಜಮೀರ್ ಅಹಮದ್ ವಜಾಕ್ಕೆ ಆಗ್ರಹ: ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಅವರು ನಡೆಸುತ್ತಿರುವ ಅಪಚಾರ ಮತ್ತು ನೀಡುತ್ತಿರುವ ಅಸಂಬದ್ದ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಪಕ್ಷದ ೨೩ ಮಂದಿ ಶಾಸಕರು ಹೈಕಮಾಂಡ್ವರೆಗೆ ದೂರು ಕೊಂಡೊಯ್ದಿದ್ದಾರೆ. ಆದರೂ ಸಿದ್ಧರಾಮಯ್ಯ ಅವರು ಇಂತಹ ಸಚಿವರನ್ನು ರಕ್ಷಿಸುವ ಕೆಲಸ ಮಾಡುತ್ತಿರುವುದು ಖಂಡನೀಯವಾಗಿದೆ. ಜಮೀರ್ ಅಹಮದ್ ಅವರನ್ನು ಸರಕಾರ ಕೂಡಲೇ ವಜಾ ಮಾಡಬೇಕು. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸಿದ್ಧರಾಮಯ್ಯ ಸರಕಾರ ಹಗರಣಗಳ ಸರಕಾರವೆಂಬ ಕುಖ್ಯಾತಿ ಗಳಿಸುತ್ತಿದೆ. ಸರಕಾರದ ಬೇಜವಬ್ದಾರಿ ನಡೆ ಮತ್ತು ವಕ್ಪ್ ಮಂಡಳಿಯ ಅವಾಂತರದಿಂದಾಗಿ ರಾಜ್ಯದ ಜನತೆಯ ಸಾಮರಸ್ಯದ ಬದುಕಿಗೆ ಕೊಳ್ಳಿಯಿಟ್ಟಂತಾಗಿದೆ. ರೈತರ ಜಮೀನು ಕಬಳಿಕೆ ಹುನ್ನಾರ, ವಕ್ಪ್ ಬೋರ್ಡ್ ಭೂಕಬಳಿಕೆ ವಿಚಾರದಲ್ಲಿ ಕರಾವಳಿಯಲ್ಲೂ ತನಿಖೆ ನಡೆಯಬೇಕಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ, ಸಿದ್ಧರಾಮಯ್ಯ ಸರಕಾರ ಭ್ರಷ್ಟಾಚಾರ, ಲೂಟಿ, ಲಂಚ, ಭೂಕಬಳಿಕೆ ಮತ್ತು ಜನವಿರೋಽ ನೀತಿ ಮೂಲಕ ನಗೆಪಾಟಲಿಗೀಡಾಗುತ್ತಿದೆ. ರಾಜ್ಯ ಸರಕಾರದ ವಿರುದ್ಧ ಹಿಂದೂ ಭಾಧವರೆಲ್ಲರೂ ಒಗ್ಗೂಡುವ ಅಗತ್ಯತೆ ಮತ್ತು ಅನಿವಾರ್ಯತೆ ಇದೆ. ನಮ್ಮ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಬೀದಿಗೆ ಇಳಿಯ ಬೇಕಾದ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸವಾಗಿದೆ. ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಧರ್ಮ ಯುದ್ಧಕ್ಕೆ ಅಣಿಯಾಗಬೇಕಿದೆ ಎಂದರು.
ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಅಧ್ಯಕ್ಷತೆ ವಹಿಸಿದ್ದರು. ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ, ಪಕ್ಷದ ಮುಖಂಡರಾದ ಶ್ಯಾಮಲಾ ಕುಂದರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು , ಶ್ರೀಕಾಂತ್ ನಾಯಕ್, ಶಿಲ್ಪಾ ಜಿ. ಸುವರ್ಣ, ರೇಷ್ಮಾ ಉದಯ್ ಶೆಟ್ಟಿ, ಗೀತಾಂಜಲಿ ಸುವರ್ಣ, ಶಶಿಕಾಂತ್ ಪಡುಬಿದ್ರಿ, ಮಿಥುನ್ ಆರ್. ಹೆಗ್ಡೆ, ಗೋಪಾಲ ಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು, ನೀತಾ ಗುರುರಾಜ್, ಸುಮಾ ಶೆಟ್ಟಿ, ಸುಧಾಮ ಶೆಟ್ಟಿ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಕೃಷ್ಣ ರಾವ್, ವಿಜಯಕುಮಾರ್ ಉದ್ಯಾವರ, ಎಂ.ಜಿ. ನಾಗೇಂದ್ರ, ಹರೀಶ್ ಸೇರಿಗಾರ್, ಕೇಸರಿ ಯುವರಾಜ್, ನವೀನ್ ಎಸ್.ಕೆ., ಸಂದೀಪ್ ಶೆಟ್ಟಿ, ಕುತ್ಯಾರು ಪ್ರಸಾದ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಸದಾನಂದ್ ನಾಯ್ಕ್, ದಿಲ್ಲೇಶ್ ಶೆಟ್ಟಿ, ರವಿ ಸಾಲ್ಯಾನ್, ಸೋನು ಪಾಂಗಾಳ, ಜನಪ್ರತಿನಿಧಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಪರಿವಾರ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
ತಾಲೂಕು ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲು ಮನವಿ : ಪ್ರತಿಭಟನಾ ಸಭೆಯ ಬಳಿಕ ಕಾಪು ಪೇಟೆಯಿಂದ ತಹಶೀಲ್ದಾರ್ ಕಚೇರಿವರೆಗೆ ಜಾಥಾ ನಡೆಸಲಾಯಿತು. ಬಳಿಕ ತಹಶೀಲ್ದಾರ್ ಕಚೇರಿಯಲ್ಲಿ ಉಪತಹಶೀಲ್ದಾರ್ಗಳಾದ ರವಿಕಿರಣ್ ಮತ್ತು ದೇವಕಿ ಅವರ ಮೂಲಕವಾಗಿ ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯದ ವಿವಿಧೆಡೆ ವಕ್ಪ್ ಮಂಡಳಿ ಮೂಲಕ ಆಗುತ್ತಿರುವ ಭೂಕಬಳಿಕೆಯು ಕಾಪು ತಾಲೂಕಿನಲ್ಲಿಯೂ ಆಗುತ್ತಿರುವ ಬಗ್ಗೆ ಕ್ಷೇತ್ರದ ಜನರಲ್ಲಿ ಸಂಶಯಗಳಿದ್ದು, ತಾಲೂಕು ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆದು ಆರ್.ಟಿ.ಸಿ ಪರಿಶೀಲನೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: Haveri: ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ