ಹಿರೇಕೆರೂರ: ಕ್ಷೇತ್ರದ ಅಭಿವೃದ್ಧಿಗೆ ಬಿ.ಸಿ. ಪಾಟೀಲ ಯು.ಬಿ. ಬಣಕಾರ ಜೋಡೆತ್ತೆಗಳನ್ನು ಬಿಟ್ಟಿದ್ದೇವೆ. ಎರಡು ಜೋಡೆತ್ತುಗಳು ಕ್ಷೇತ್ರವನ್ನು ಪರಿವರ್ತನೆ ಮಾಡುವ ಜತೆಗೆ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಮಾದರಿ ಕ್ಷೇತ್ರವನ್ನಾಗಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿದರು.
ರಟ್ಟಿಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಪರ ಆಯೋಜಿಸಿದ್ದ ರೋಡ್ ಶೋದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಜನಸಾಗರ ಮತಸಾಗರವಾಗಲಿ. ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಗೆಲುವು ಅಭೂತಪೂರ್ವವಾಗಲಿ ಎಂದರು.
ಬಿ.ಸಿ. ಪಾಟೀಲರನ್ನು ಕೇವಲ ಶಾಸಕರನ್ನಾಗಿ ಆಯ್ಕೆ ಮಾಡುವುದಲ್ಲ, ಸಚಿವರನ್ನಾಗಿಸಲು ಗೆಲ್ಲಿಸಬೇಕು. ಯಡಿಯೂರಪ್ಪ ಸರ್ಕಾರ ಮುಂದುವರೆಯಲು ಬಿ.ಸಿ.ಪಾಟೀಲ ಸಚಿವರಾಗಿ ಕ್ಷೇತ್ರಕ್ಕೆ ಬರುವಂತಾಗಬೇಕು. ಬಿ.ಸಿ. ಪಾಟೀಲ ಯು.ಬಿ. ಬಣಕಾರ ಜೋಡೆತ್ತಿನಂತೆ ಕ್ಷೇತ್ರವನ್ನು ಮಾದರಿ ಮಾಡುತ್ತಾರೆ. 3 ತಿಂಗಳಲ್ಲಿ 250 ಕೋಟಿ ರೂ. ಅನುದಾನ ನೀಡಿರುವ ಯಡಿಯೂರಪ್ಪ ಮೂರುವರೆ ವರ್ಷಗಳಲ್ಲಿ ಸಾವಿರಾರು ಕೋಟಿ ಅನುದಾನ ನೀಡಲಿದ್ದಾರೆ. ರಾಜ್ಯದಲ್ಲಿಯೇ ಈ ಕ್ಷೇತ್ರ ಮಾದರಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದರು.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ನೋಟು ಕೊಟ್ಟು ವೋಟು ಪಡೆಯುವ ಅನಿವಾರ್ಯತೆ ಬಿಜೆಪಿಗೆ ಬಂದಿಲ್ಲ, ಕಾಂಗ್ರೆಸ್ ಪಕ್ಷದವರು ಇಷ್ಟು ವರ್ಷ ದುಡ್ಡಿನಲ್ಲಿಯೇ ದೇಶ ನಡೆಸಿಕೊಂಡು ಬಂದಿದ್ದಾರೆ. ಜನತೆ ಯಡಿಯೂರಪ್ಪ ಹಾಗೂ ನರೇಂದ್ರ ಮೋದಿಯವರ ಮೇಲಿನ ಅಭಿಮಾನದಿಂದ ಬಿಜೆಪಿಗೆ ಮತ ನೀಡುತ್ತಾರೆ. ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಗೆದ್ದಾಗಿದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ ಮಾತನಾಡಿ, ನಮ್ಮ ತ್ಯಾಗದಿಂದ ಸಮ್ಮಿಶ್ರ ಸರ್ಕಾರ ಪತನವಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ. ಕ್ಷೇತ್ರದ ಸರ್ವಾಂಗೀಣ ಪ್ರಗತಿಗಾಗಿ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದ ಮಾಸೂರು ಗ್ರಾಮದಿಂದ ಆರಂಭಗೊಂಡ ರೋಡ ಶೋ ರಟ್ಟಿಹಳ್ಳಿ, ಕೋಡ, ಹಂಸಭಾವಿಯಲ್ಲಿ ಅಪಾರ ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಪರ ಮತಯಾಚನೆ ಮಾಡಿದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ ಹಾಗೂ ಇತರರಿದ್ದರು.