Advertisement

ಯೋಗಿ ಆದಿತ್ಯನಾಥ್ ರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ?

07:56 PM Jan 12, 2022 | Team Udayavani |

ನವದೆಹಲಿ : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸಲು ಭಾರತೀಯ ಜನತಾ ಪಕ್ಷ ಮುಂದಾಗಿದೆ ಎಂದು ಕೆಲ ವರದಿಗಳು ಹೇಳಿವೆ.

Advertisement

ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಬಿಜೆಪಿಯಲ್ಲಿ ಸಭೆಗಳ ಸುತ್ತು ಆರಂಭವಾಗಿದ್ದು, ಮಂಗಳವಾರ, ರಾಜಧಾನಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಈ ಸಂಬಂಧ ಸಭೆಯಲ್ಲಿ ಯೋಗಿ ಅವರು ಇತರ ಪ್ರಮುಖ ನಾಯಕರೊಂದಿಗೆ ಉಪಸ್ಥಿತರಿದ್ದರು. ಉತ್ತರ ಪ್ರದೇಶದಲ್ಲಿ ಈ ಬಾರಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಫೆಬ್ರವರಿ 10 ರಂದು ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ಸ್ಥಾನಗಳಲ್ಲಿ ಮತದಾನ ನಡೆಯಲಿದೆ.

ಆದಿತ್ಯನಾಥ್ ಅವರು ಪ್ರಸ್ತುತ ವಿಧಾನ ಪರಿಷತ್ತಿನ ಸದಸ್ಯರಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ ಆದರೆ ಅದರ ಬಗ್ಗೆ ಅಂತಿಮ ನಿರ್ಧಾರವನ್ನು ಪಕ್ಷದ ಉನ್ನತ ನಾಯಕತ್ವ ತೆಗೆದುಕೊಳ್ಳುತ್ತದೆ ಎಂದು ಅವರು ಇತ್ತೀಚೆಗೆ ಹೇಳಿದ್ದರು. ಯೋಗಿ ಆದಿತ್ಯನಾಥ್ ಅವರನ್ನು ಅಯೋಧ್ಯೆಯಿಂದ ಕಣಕ್ಕೆ ಇಳಿಸುವ ಕುರಿತು ಪಕ್ಷದೊಳಗೆ ಚರ್ಚೆ ನಡೆದಿದೆ, ಆದರೆ ಪಕ್ಷದ ಕೇಂದ್ರ ಚುನಾವಣಾ ಸಮಿತಿಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಸದಸ್ಯರಾಗಿದ್ದಾರೆ. ಮೂಲಗಳ ಪ್ರಕಾರ, ಮೊದಲ ಮತ್ತು ಎರಡನೇ ಹಂತಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳ ಹೆಸರನ್ನು ನಿರ್ಧರಿಸಲು ಸಿಇಸಿಯ ಸಭೆ ಶೀಘ್ರದಲ್ಲೇ ನಡೆಯಲಿದೆ. ಎರಡನೇ ಹಂತದಲ್ಲಿ ಫೆಬ್ರವರಿ 14 ರಂದು ರಾಜ್ಯದ 55 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಬಿಜೆಪಿಯ ಉನ್ನತ ನಾಯಕತ್ವವು ಯೋಗಿ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದರೆ ಅಯೋಧ್ಯೆಯ ಹೊರತಾಗಿ ಮಥುರಾ ಮತ್ತು ಗೋರಖ್‌ಪುರ ಎರಡು ಸ್ಥಾನಗಳಿಂದ ಮುಖ್ಯಮಂತ್ರಿಯವರನ್ನು ಕಣಕ್ಕಿಳಿಸಬಹುದು. ಗೋರಖ್‌ಪುರವನ್ನು ಯೋಗಿ ಆದಿತ್ಯನಾಥರ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಅಲ್ಲಿಂದ ಹಲವು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದಾರೆ. ಅವರು ಗೋರಖನಾಥ ದೇವಾಲಯದ ಮುಖ್ಯ ಮಹಂತ್ ಕೂಡ ಆಗಿದ್ದಾರೆ.

Advertisement

ಲೆಕ್ಕಾಚಾರ

ಪಕ್ಷ ಅವರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಿದರೆ ದೊಡ್ಡ ಸಂದೇಶ ರವಾನಿಸಿದಂತಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಏಕೆಂದರೆ ರಾಮಮಂದಿರ ನಿರ್ಮಾಣವು ವೇಗವಾಗಿ ನಡೆಯುತ್ತಿದೆ ಮತ್ತು ಯೋಗಿ ಆದಿತ್ಯನಾಥ್ ಪಕ್ಷದ ಪ್ರಮುಖ ಹಿಂದುತ್ವದ ಮುಖ. ಅಯೋಧ್ಯೆ ಅವಧ್ ಪ್ರದೇಶದಲ್ಲಿ ಬರುವುದರಿಂದ ಮತ್ತು ಸಮಾಜವಾದಿ ಪಕ್ಷವು ಸಾಂಪ್ರದಾಯಿಕವಾಗಿ ಇಲ್ಲಿ ಪ್ರಬಲವಾಗಿದೆ, ಆದ್ದರಿಂದ ಪಕ್ಷವು ಇಲ್ಲಿಂದ ಯೋಗಿ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸಿದರೆ ಅದರ ಲಾಭ ಪಡೆಯಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಅಯೋಧ್ಯೆ ಕ್ಷೇತ್ರವನ್ನು ಪ್ರಸ್ತುತ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ವೇದ್ ಪ್ರಕಾಶ್ ಗುಪ್ತಾ ಪ್ರತಿನಿಧಿಸುತ್ತಿದ್ದಾರೆ. ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಅವರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಅಭ್ಯರ್ಥಿಗಳ ಹೆಸರು ಹಾಗೂ ಚುನಾವಣಾ ಕಾರ್ಯತಂತ್ರದ ಬಗ್ಗೆ ಕೇಂದ್ರ ನಾಯಕತ್ವದೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next