Advertisement

ಬಿಜೆಪಿ ಪ್ರಹ್ಲಾದ ಫ‌ುಲ್‌ ಜೋಶ್‌

05:00 PM Apr 04, 2019 | Team Udayavani |

ಧಾರವಾಡ: ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಹ್ಲಾದ ಜೋಶಿ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮುನ್ನ ಮುರುಘಾಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು, ಮೃತ್ಯುಂಜಯ ಹಾಗೂ ಮಹಾಂತ ಅಪ್ಪಗಳ ದರ್ಶನ ಪಡೆದರು.

Advertisement

ನಂತರ ನಗರದ ಶಿವಾಜಿ ಸರ್ಕಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ, ಅಲ್ಲಿಂದ ಕಾರ್ಯಕರ್ತರ ಜಗೆ ತೆರೆದ ವಾಹನದಲ್ಲಿ ಬೃಹತ್‌ ಮೆರವಣಿಗೆ ನಡೆಸಿದರು. ನಂತರ ಸ್ವಾಮಿ ವಿವೇಕಾನಂದ ಮೂರ್ತಿ, ಬಸವೇಶ್ವರ ಪುತ್ಥಳಿ ಹಾಗೂ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಶಿವಾಜಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಶಿವಾಜಿ ರಸ್ತೆ, ರೀಗಲ್‌ ವೃತ್ತ, ಸಿಬಿಟಿ, ಅಂಜುಮನ್‌ ಸರ್ಕಲ್‌, ಆಝಾದ್‌ ಪಾರ್ಕ್‌ ಜುಬ್ಲಿ ಸರ್ಕಲ್‌, ಕೋರ್ಟ್‌ ಸರ್ಕಲ್‌ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಡಿಸಿ ಕಚೇರಿಯತ್ತ ಸಾಗಿತು. ಅಲ್ಲಿಂದ ಪಾದಯಾತ್ರೆ ಮೂಲಕ ಆಗಮಿಸಿದ ಜೋಶಿ ಅವರು ಸೂಚಕರ ಸಮ್ಮುಖದಲ್ಲಿ ತಮ್ಮ ಉಮೇದಾರಿಕೆಯನ್ನು ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್‌ ಅವರಿಗೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಬಿಜೆಪಿ ವಸ್ತ್ರ ಧರಿಸಿ, ಕೈಯಲ್ಲಿ ಬಾವುಟ ಹಿಡಿದ ಮೋದಿ ಹಾಗೂ ಜೋಶಿ ಪರ ಘೋಷಣೆ ಕೂಗಿದರು. ಈ ವೇಳೆ ಬಿಸಿಲಿನಿಂದ ಬೆಂಡಾದ ಕಾರ್ಯಕರ್ತರಿಗೆ ನೀರು ಹಾಗೂ ಮಜ್ಜಿಗೆ ವಿತರಿಸಲಾಯಿತು.

ನಾಲ್ಕು ನಾಮಪತ್ರ ಸಲ್ಲಿಕೆ: ಸತತ 3 ಸಲ ಆಯ್ಕೆಆಗಿ 4ನೇ ಬಾರಿ ಸಂಸದರಾಗಿ ಆಯ್ಕೆಯಾಗಲು ಚುನಾವಣಾ ಕಣಕ್ಕಿಳಿದಿರುವ ಜೋಶಿ ಅವರು, ಒಟ್ಟು ನಾಲ್ಕು ನಾಮಪತ್ರ ಸಲ್ಲಿಸಿದರು. ಮೊದಲ ನಾಮಪತ್ರ ಸಲ್ಲಿಸುವ ವೇಳೆ ಸಿಎಂ ಜಗದೀಶ ಶೆಟ್ಟರ, ಗೋವಿಂದ ಕಾರಜೋಳ , ಬಸವರಾಜ
ಬೊಮ್ಮಾಯಿ ಸಾಥ್‌ ನೀಡಿದರು. 2ನೇ ನಾಮಪತ್ರ ಸಲ್ಲಿಸುವಾಗ ಪ್ರಭಾಕರ ಕೋರೆ, ಶಾಸಕ ಸಿ.ಎಂ.ನಿಂಬಣ್ಣವರ, ವಿಧಾನ ಪರಿಷತ್‌ ಸದಸ್ಯ ಪ್ರದೀಪ್‌ ಶೆಟ್ಟರ, 3ನೇ ನಾಮಪತ್ರ ಸಲ್ಲಿಸುವಾಗ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಶಾಸಕರಾದ ಶಂಕರಗೌಡ ಮುನೇನಕೊಪ್ಪ, ಅಮೃತ ದೇಸಾಯಿ ಹಾಗೂ 4ನೇ ನಾಮಪತ್ರ ಸಲ್ಲಿಸುವಾಗ ಶಾಸಕ ಅರವಿಂದ ಬೆಲ್ಲದ, ಈರೇಶ ಅಂಚಟಗೇರಿ ಸಾಥ್‌ ನೀಡಿದರು.

Advertisement

ಜೋಶಿ ಆಸ್ತಿ 3 ಪಟ್ಟು ಹೆಚ್ಚಳ
ಧಾರವಾಡ: ಹಾಲಿ ಸಂಸದ ಪ್ರಹ್ಲಾದ ಜೋಷಿ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ಒಟ್ಟು ಮೂರು ಪಟ್ಟು ಹೆಚ್ಚಳವಾಗಿದ್ದು, ಅವರು 11.13 ಕೋಟಿ ರೂ.ಗಳ ಆಸ್ತಿಯ ಒಡೆಯರಾಗಿದ್ದಾರೆ. ಈ ಪೈಕಿ ಸಂಸದ ಜೋಶಿ ಅವರ ಹೆಸರಿನ ಸ್ಥಿರ ಮತ್ತು ಚರಾಸ್ಥಿ ಮೌಲ್ಯ ಒಟ್ಟು 10.34 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಅವರ ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ 75 ಲಕ್ಷ ರೂ.ಮೌಲ್ಯದ ಆಸ್ತಿ ಹೊಂದಿರುವುದಾಗಿ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಜೋಶಿ ಮಾಹಿತಿ ನೀಡಿದ್ದಾರೆ.

ಅವರು ತಮ್ಮ ಹೆಸರಿನಲ್ಲಿ ಒಟ್ಟು 8.9 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿಯನ್ನು ಹೊಂದಿದ್ದಾರೆ. ಹುಬ್ಬಳ್ಳಿಯ ಮಯೂರಿ ಎಸ್ಟೇಟ್‌ ನಲ್ಲಿ 1.87 ಕೋಟಿ ರೂ. ಮೌಲ್ಯದ ಒಂದು ಮನೆ, ಬೆಂಗಳೂರಿನ ಮಲ್ಲೇಶ್ವನ ಅಪಾರ್ಟ್‌ಮೆಂಟ್‌ ನಲ್ಲಿ ಖರೀದಿಸಿದ 2.26 ಕೋಟಿ ರೂ. ಮೌಲ್ಯದ ಒಂದು ಮನೆ ಹುಬ್ಬಳ್ಳಿಯ ಕೇಶ್ವಾಪೂರದಲ್ಲಿ 1.94 ಕೋಟಿ ರೂ.ಮೌಲ್ಯದ ಎನ್‌ಎ ಆಗಿರುವ ಖಾಲಿ ಜಾಗೆ, ಬೆಂಗಳೂರಿನ ಸರ್ಜಾಪೂರ ರಸ್ತೆಯಲ್ಲಿ 2.26 ಕೋಟಿ ರೂ. ಮೌಲ್ಯದ ಒಂದು ಬಿಡಿಎ ನಿವೇಶನ ಹೊಂದಿದ್ದು ಇದರ ಒಟ್ಟು ಮೌಲ್ಯ 8.9 ಕೋಟಿ ರೂ.ಗಳಾಗಿದೆ ಎಂದು ಅಫಿಡೆವಿಟ್‌ನಲ್ಲಿ ನಮೂದಿಸಿದ್ದಾರೆ.

ಇನ್ನು ತಮ್ಮ ಕೈಯಲ್ಲಿ 3.10 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿ ಹಾಗೂ 5 ಕೆ.ಜಿ.ಬೆಳ್ಳಿ, 104 ಗ್ರಾಂ ಬಂಗಾರ ಹಾಗೂ 10 ಲಕ್ಷ ರೂ.ಮೌಲ್ಯದ ಒಂದು ಮಹೀಂದ್ರಾ ಸ್ಕಾರ್ಪಿಯೋ ವಾಹನ, ವಿವಿಧ ಮಾರ್ಕೇಟಿಂಗ್‌ ಕಂಪನಿಗಳಲ್ಲಿ ಹೂಡಿರುವ ಬಾಂಡ್‌ಗಳು ಮತ್ತು ವೈಭವ ಮಾರ್ಕೆಟಿಂಗ್‌ ಕಂಪನಿಯಲ್ಲಿ ಹೂಡಿರುವ ಬಂಡವಾಳ ಸೇರಿ ಒಟ್ಟು 2.24 ಕೋಟಿ ರೂ.ಗಳಿಗೂ ಅಧಿಕ ಹಣವಿರುವುದನ್ನು ನಮೂದಿಸಿದ್ದಾರೆ.

ಕುಟುಂಬ ಸದಸ್ಯರು : ಅವರ ಧರ್ಮಪತ್ನಿ ಜ್ಯೋತಿ ಜೋಶಿ ಅವರ ಕೈಯಲ್ಲಿ 50 ಸಾವಿರ ರೂ.ನಗದು, ವಿವಿಧ ಬ್ಯಾಂಕ್‌ಗಳಲ್ಲಿ 3.15 ಲಕ್ಷ ರೂ. ಠೇವಣಿ, ಇನ್ನು ಕಂಪನಿಯೊಂದರಲ್ಲಿ 8.59 ಲಕ್ಷ ರೂ.ಮೌಲ್ಯದ ಶೇರುಗಳಿವೆ. 2 ಕೆ.ಜಿ. ಬೆಳ್ಳಿ, 300ಗ್ರಾಂ ಬಂಗಾರ ಹಾಗೂ ವಿವಿಧ ಬ್ಯಾಂಕುಗಳಲ್ಲಿನ ಠೇವಣಿ ಹಣವೂ ಸೇರಿ 27.11 ಲಕ್ಷ ರೂ.ಗಳಿಗೂ ಅಧಿಕ ಚರಾಸ್ಥಿ ಹೊಂದಿದ್ದಾರೆ.

ಅರ್ಪಿತಾ ಜೋಶಿ ಅವರ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಹಣ ಸೇರಿದಂತೆ 63 ಸಾವಿರ ಠೇವಣಿ ಹಣ ಸೇರಿದಂತೆ ಒಟ್ಟು 18.99 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚರಾಸ್ಥಿ ಇದೆ. ಇನ್ನೋರ್ವ ಪುತ್ರಿ ಅನುಷಾ ಜೋಶಿ ಅವರ ಬ್ಯಾಂಕ್‌ ಠೇವಣಿಗಳು ಸೇರಿದಂತೆ ಒಟ್ಟು 16.51 ಲಕ್ಷ ರೂ.ಮೌಲ್ಯದ ಚರಾಸ್ಥಿ ಇದೆ. ಜೋಶಿ ಅವರ 3ನೇ ಪುತ್ರಿ ಅನನ್ಯಾ ಜೋಶಿ ಹೆಸರಿನಲ್ಲಿ ಒಟ್ಟು 16.81 ಲಕ್ಷ ರೂ.ಮೌಲ್ಯದ ಚರಾಸ್ಥಿ ಹೊಂದಿದ್ದಾರೆ. ಇದೇ ವೇಳೆ ವಿವಿಧ ಬ್ಯಾಂಕುಗಳಲ್ಲಿ 5.15 ಕೋಟಿ ರೂ.ನಷ್ಟು ಸಾಲವನ್ನು ಕೂಡ ಹೊಂದಿದ್ದಾರೆ. ಇನ್ನು ಅವರ ಪತ್ನಿ ಅವರದ್ದು 2 ಲಕ್ಷ ರೂ.ಸಾಲವಿದೆ. ಇನ್ನು ಜೋಶಿ ಅವರು 2009 ರಲ್ಲಿ 1.13 ಕೋಟಿ ಆಸ್ತಿಯ ಒಡೆಯರಾಗಿದ್ದ ಅವರು 2014 ಕ್ಕೆ 2.79 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದರು.

ಕಾಂಗ್ರೆಸ್‌ ಪ್ರಣಾಳಿಕೆಯಿಂದ ಪಾಕ್‌ಗೆ ಸಹಾಯ: ಜೋಶಿ
ಧಾರವಾಡ: ಪಾಕ್‌ ಹಾಗೂ ಉಗ್ರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷ ಪ್ರಕಟಿಸಿರುವ ಪ್ರಣಾಳಿಕೆ ಪ್ರಕಟಿಸಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿ, ಸಂಸದ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿ ಬುಧವಾರ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈನಿಕರಿಗೆ ನೀಡಿರುವ ಪರಮಾಧಿಕಾರಿ ಹಿಂಪಡೆಯುವ ಹಾಗೂ ಜಮ್ಮು-ಕಾಶ್ಮೀರದಲ್ಲಿ 320 ಕಲಂ ವಜಾ ಮಾಡಲು ಬಿಡಲ್ಲ ಎಂಬ ಭರವಸೆ ನೀಡುವ ಮೂಲಕ ದೇಶ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಮರ್ಯಾದೆ ಇದ್ದರೆ ಈ ಕೂಡಲೇ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಹಿಂಪಡೆಯಬೇಕು. ಕಾಂಗ್ರೆಸ್‌ ಬೌದ್ಧಿಕ ದಿವಾಳಿತನ ಪ್ರದರ್ಶಿಸುತ್ತಿದೆ. ದೇಶದಲ್ಲಿ ಗಂಭೀರ ಪರಿಸ್ಥಿತಿ ಇದ್ದಾಗ ಕಾಂಗ್ರೆಸ್‌ ಚೆಲ್ಲಾಟ ಆಡುತ್ತಿದೆ. ಭಾರತ ಟುಕಡೆ ಟುಕಟೆ ಕರೆಂಗೆ ಅಂದೋರ ಜೊತೆಗೆ
ಕೈಮಿಲಾಯಿಸಿದ್ದಾರೆ. ನಾವು ಪ್ರತಿ ವರ್ಷ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದೇವೆ. ಗರೀಬಿ ಹಠಾವೋ ಅಂದಿದ್ದ ಕಾಂಗ್ರೆಸ್‌ ಈ ವರೆಗೆ ಆ ಬಗ್ಗೆ ಯೋಚನೆಯನೇ ಮಾಡಿಲ್ಲ ಎಂದರು.

ನನಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ಸಚಿವ ವಿನಯ
ಕುಲಕರ್ಣಿ ವಿರುದ್ಧ ಕನಿಷ್ಟ 2 ಲಕ್ಷಗಳ ಮತಗಳ ಅಂತರದಿಂದ ಗೆಲ್ಲುವ ಜೊತೆಗೆ ನಾಲ್ಕನೇ ಬಾರಿಗೆ ಲೋಕಸಭೆ ಪ್ರವೇಶ ಮಾಡುವ ಭರವಸೆ ಇದೆ.
ಪ್ರಹ್ಲಾದ ಜೋಶಿ, ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next