ಲಕ್ನೋ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನ ಹೊಂದಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಪ್ರಣಾಳಿಕೆ ಬಿಡುಗಡೆಯನ್ನು ಬಿಜೆಪಿ ಭಾನುವಾರ ಮುಂದೂಡಿದೆ ಎಂದು ಪಕ್ಷದ ರಾಜ್ಯ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ 10.15ಕ್ಕೆ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ನಿಗದಿಯಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷರು ಸೇರಿದ್ದರು.
“ಲತಾ ಮಂಗೇಶ್ಕರ್ ಅವರ ನಿಧನದ ದುಃಖದಿಂದಾಗಿ , ನಾವು ಲೋಕ ಕಲ್ಯಾಣ ಸಂಕಲ್ಪ ಪತ್ರದ ಬಿಡುಗಡೆಯನ್ನು ಮುಂದೂಡುತ್ತಿದ್ದೇವೆ. ಅದರ ಬಿಡುಗಡೆಯ ಮುಂದಿನ ದಿನಾಂಕವನ್ನು ನಾವು ನಂತರ ನಿರ್ಧರಿಸುತ್ತೇವೆ” ಎಂದು ಸಿಂಗ್ ಹೇಳಿದರು.
ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿ ನಾಯಕರು ಎರಡು ನಿಮಿಷ ಮೌನ ಆಚರಿಸಿದರು. 92 ವರ್ಷದ ಮಂಗೇಶ್ಕರ್ ಅವರು ಮುಂಬೈನ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದ್ದಾರೆ.