ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ ಮತ್ತೆ ಅಧಿಕಾರಕ್ಕೆ ಬರಲು ಭಾರೀ ರಣತಂತ್ರಗಳನ್ನು ಹಣೆಯುತ್ತಿರುವ ಬಿಜೆಪಿ ಇದೀಗ ಆಕರ್ಷಕ ಪ್ರಣಾಳಿಕೆ ಸಿದ್ದಪಡಿಸಲು ಮುಂದಾಗಿದೆ. ಈ ಸಂಬಂಧ ಭಾನುವಾರ ದೆಹಲಿಯ ಪ್ರಧಾನ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ನೇತೃತ್ವದ 20 ಸದಸ್ಯರ ಸಮಿತಿ ಮಹತ್ವದ ಸಭೆ ನಡೆಸಿದೆ.
15 ಉಪಸಮಿತಿಗಳನ್ನು ರಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ ಪ್ರಣಾಳಿಕೆ ರಚಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ಸಮಿತಿಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಪಾಲುದಾರರು ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿ ಅಭಿಪ್ರಾಯಗಳನ್ನುನೀಡಲಿದ್ದಾರೆ ಎಂದು ಸಭೆಯ ಬಳಿಕ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕಳೆದ ವಾರ ರಾಜ್‌ನಾಥ್ ಸಿಂಗ್ ಪ್ರಣಾಳಿಕೆ ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎಂದು ಘೋಷಿಸಿದ್ದರು. ಸಮಿತಿಯಲ್ಲಿ ಅರುಣ್ ಜೇಟ್ಲಿ,ನಿರ್ಮಲಾ ಸೀತಾರಾಮನ್, ಥಾವರ್ ಚಂದ್ ಗೆಹ್ಲೋಟ್, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ಮುಖ್ತಾರ್ ಅಬ್‌ಬಾಸ್ ನಖ್ವಿ , ಕೆ.ಜೆ.ಅಲ್ಫೋನ್ಸೋ, ಶಿವರಾಜ್ ಸಿಂಗ್ ಚೌಹಾಣ್, ಕಿರಣ್ ರಿಜಿಜು, ಸುಶೀಲ್ ಕುಮಾರ್ ಮೋದಿ, ಕೇಶವ್ ಪ್ರಸಾದ್ ಮೌರ್ಯ, ಅರ್ಜುನ್ ಮುಂಡಾ, ರಾಮ್ ಮಾಧವ್,ಭುಪೇಂದ್ರ ಯಾದವ್, ನಾರಾಯಣ ರಾಣೆ, ಮೀನಾಕ್ಷಿ ಲೇಖೀ ,ಸಂಜಯ್ ಪಾಸ್ವಾನ್, ಹರಿ ಬಾಬು ಮತ್ತು ರಾಜೇಂದ್ರ ಮೋಹನ್ ಸಿಂಗ್ ಚೀಮಾ ಅವರಿದ್ದಾರೆ.
ಈಗಾಗಲೇ ಬಿಜೆಪಿ ಚುನಾವಣೆಗಾಗಿ 17 ಸಮಿತಿಗಳನ್ನು ಪ್ರಕಟಿಸಿದ್ದು,ಆ ಸಮಿತಿಗಳು ಚುನಾವಣೆಯ ವಿವಿಧ ಕೆಲಸಗಳನ್ನು ನೋಡಿಕೊಳ್ಳಲಿದೆ.
ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ 8 ಸದಸ್ಯರ ಪ್ರಚಾರ ಸಮಿತಿಯನ್ನು ರಚಿಸಲಾಗಿದೆ.