Advertisement

ಕೊರೊನಾ ಸಾವಿನ ಸಂಖ್ಯೆಯಲ್ಲೂ ಬಿಜೆಪಿ ರಾಜಕಾರಣ

05:00 PM May 09, 2022 | Team Udayavani |

ಬಳ್ಳಾರಿ: ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಬಗ್ಗೆ ತಪ್ಪು ಮಾಹಿತಿ ನೀಡಿ ಕೋವಿಡ್‌ ಸಾವಿನ ಸಂಖ್ಯೆಯಿಂದಲೂ ರಾಜಕಾರಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2020-2021ರಲ್ಲಿ ದೇಶದಲ್ಲಿ ಕೋವಿಡ್‌ ಸೋಂಕಿನಿಂದ ಸುಮಾರು 47 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಹೆಚ್‌ಒ) ಹೇಳಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ದೇಶದಲ್ಲಿ ಕೇವಲ 4.70 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್‌ ಆಗಲೇ ಹೋರಾಟ ನಡೆಸಿ, ಡೆತ್‌ ಆಡಿಟ್‌ ಆಗಬೇಕು. ಕೋವಿಡ್‌ ಸಾವಿನ ಕುರಿತು ನೈಜ ವರದಿ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಆದರೂ ಕೇಂದ್ರ ಸರ್ಕಾರ, ಕೇವಲ 4.70 ಲಕ್ಷ ಎಂದು ಪ್ರತಿವಾದಿಸಿದೆ. ಇದರಿಂದ ವಿಶ್ವದ ದೃಷ್ಟಿಯಲ್ಲಿ ಭಾರತದ ಘನತೆ, ಗೌರವಕ್ಕೆ ಧಕ್ಕೆಯಾಗಿದ್ದು, ಸಾವಿನ ಸಂಖ್ಯೆಯೊಂದಿಗೂ ರಾಜಕಾರಣ ಮಾಡುತ್ತಿರುವ ಮೋದಿಯವರು ದೇಶದ ಜನರನ್ನು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಸಚಿವರಾಗಿಯೇ ಏನು ಮಾಡಿಲ್ಲ, ಇನ್ನು ಡಿಸಿಎಂ ಆಗಿ ಏನು ಕಡಿದು ಕಟ್ಟಿಹಾಕ್ತಾರೆ ಎಂದು ವ್ಯಂಗ್ಯವಾಡಿದ ಉಗ್ರಪ್ಪ, ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದಿಂದಾಗಿ ರಾಜ್ಯದಲ್ಲಿರುವುದು ಬಿಜೆಪಿಯ ಭ್ರಷ್ಟ ಸರ್ಕಾರವೆಂಬುದು ಸಾಬೀತಾಗಿದೆ. ಅಕ್ರಮ ನೇಮಕಾತಿಯನ್ನು ತನಿಖೆ ನಡೆಸುವಂತೆ ಸಚಿವ ಪ್ರಭು ಚೌಹಾಣ್‌, ಸಂಕನೂರು, ಕಾಂಗ್ರೆಸ್‌ ಶಾಸಕ ಎಸ್‌. ರವಿ ಇನ್ನಿತರರು ಸರ್ಕಾರಕ್ಕೆ ಪತ್ರ ಬರೆದು ತನಿಖೆ ನಡೆಸುವಂತೆ ಕೋರಿದ್ದಾರೆ ಎಂದು ತಿಳಿಸಿದರು.

ಮಗಳಿಗೆ ಮೆಡಿಕಲ್‌ ಸೀಟ್‌

ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ವಿರುದ್ಧ ಇದೇ ವೇಳೆ ಹರಿಹಾಯ್ದ ಉಗ್ರಪ್ಪ, ನಿಮ್ಮ ನಾಲಿಗೆ ಮೇಲೆ ಹಿಡಿತವಿರಲಿ. ನೀವು ರಾಜಕೀಯಕ್ಕೆ ಬರುವ ಮುನ್ನ ನಿಮ್ಮ ಆಸ್ತಿ ಎಷ್ಟಿತ್ತು. ಈಗ ಎಷ್ಟು ಇದೆ ಎಂಬುದು ಎಲ್ಲರಿಗೂ ತಿಳಿದಿದೆ. 5 ಲಕ್ಷಕ್ಕೂ ಹೆಚ್ಚು ರ್‍ಯಾಂಕ್‌ ಇರುವ ನಿಮ್ಮ ಮಗಳಿಗೆ ಎಂ.ಎಸ್‌. ರಾಮಯ್ಯ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಹೇಗೆ ದೊರೆತಿರಬಹುದು ಎಂಬುದು ನಮಗೆ ಗೊತ್ತು. ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ 5ನೇ ರ್‍ಯಾಂಕ್‌ ದರ್ಶನಗೌಡ, 10ನೇ ರ್‍ಯಾಂಕ್‌ ನಾಗೇಶ್‌ ಗೌಡ ನಿಮ್ಮ ನೆಂಟರಲ್ಲವೇ? ಇದನ್ನು ಅಭ್ಯರ್ಥಿಗಳ ಸಂಬಂಧಿ ಕರೇ ದೃಢಪಡಿಸಿದ್ದಾರೆ ಎಂದವರು ಛೇಡಿಸಿದರು. ಪಿಎಸ್‌ಐ ಅಕ್ರಮ ನೇಮಕಾತಿಯಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಪಿಎಸ್‌ಐ ಆಕ್ರಮ ನೇಮಕಾತಿಯಲ್ಲಿ ಬರಿ ಮಧ್ಯವರ್ತಿಗಳನ್ನು ಮಾತ್ರ ಬಂಧಿ ಸಲಾಗಿದೆ. ಆದರೆ ದೊಡ್ಡವರ ವಿಷಯಕ್ಕೆ ಹೋಗಿಲ್ಲ. ಕೇಂದ್ರ ಸರ್ಕಾರ ಭ್ರಷ್ಟರ ಪಾಲನೆ ಮಾಡುತ್ತಿದೆ. ಈವರೆಗೂ ಸಿಎಂ, ಮಂತ್ರಿ ಸ್ಥಾನಗಳು ಹರಾಜಾಗಿವೆ ಎನ್ನುವುದು ಗೊತ್ತಿರಲಿಲ್ಲ. ಈ ಕುರಿತು ಯತ್ನಾಳ್‌ ಹೇಳಿದ್ದಾರೆ. ಸಿಎಂ ಸ್ಥಾನ ಹಂಬಲವಿರುವ ಯತ್ನಾಳ್‌ಗೆ ಬೆದರಿಕೆ ಹಾಕುವ ಮೂಲಕ ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಯಾವ ನೈತಿಕತೆ ಇಟ್ಟುಕೊಂಡು ಬಿಜೆಪಿ ಅಧಿಕಾರ ಮಾಡುತ್ತಿದೆಯೋ ಗೊತ್ತಿಲ್ಲ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಗನಕಲ್ಲು ವಿಜಯಕುಮಾರ್‌, ತಾಯಪ್ಪ, ಪ್ರಧಾನ ಕಾರ್ಯದರ್ಶಿ ಕಾಂತಿನೋಹ ವಿಲ್ಸನ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next