ಬೆಂಗಳೂರು: ಬಿಜೆಪಿಯವರು ಎಲ್ಲದರಲ್ಲಿಯೂ ರಾಜಕಾರಣ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ ಭೀಕರ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಇದೆ. ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಲು ಸಭೆ ನಡೆಸುವುದು ಅನಿವಾರ್ಯ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪೀಡಿತ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಭೆ ಮಾಡಲು ಅವಕಾಶ ನೀಡುವಂತೆ ಚುನಾವಣಾ ಆಯೋಗಕ್ಕೆ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಈಗಾಗಲೇ ಹೊಸ ಟೆಂಡರ್ ಹಾಗೂ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಯೋಗ ಅನುಮತಿ ನೀಡಿದೆ.
ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಲು ಆಯೋಗ ಅನುಮತಿ ನೀಡಿಲ್ಲ. ಆಯೋಗದ ಅನುಮತಿ ಬಂದ ನಂತರ ಸಭೆ ನಡೆಸುತ್ತೇವೆ. ಬಿಜೆಪಿಯವರು ಇದರಲ್ಲಿಯೂ ರಾಜಕಾರಣ ಮಾಡುತ್ತಾರೆ. ಬಿಜೆಪಿಯವರು ಚುನಾವಣಾ ಆಯೋಗಕ್ಕೆ ಬಹಳ ಹತ್ತಿರವಾಗಿದ್ದಾರೆ. ಅವರು ಆಯೋಗಕ್ಕೆ ಹೇಳಿಸಿದರೆ, ನಾವು ನಮ್ಮ ಕೆಲಸ ಆರಂಭಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ, ಶಾಸಕ ಎಸ್.ಟಿ.ಸೋಮಶೇಖರ್ ಅವರು ಬಿಡಿಎಯಲ್ಲಿ ತಾವು ಡಮ್ಮಿ ಪೀಸ್ ಎಂದು ಹೇಳಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಅರ್ಥದಲ್ಲಿ ಸೋಮಶೇಖರ್ ಹಾಗೆ ಹೇಳಿದ್ದಾರೆಯೋ ಗೊತ್ತಿಲ್ಲ. ಸಮಾನ ಮನಸ್ಕ ಶಾಸಕರು ಒಂದು ಕಡೆ ಸೇರಿ ಊಟ ಮಾಡುವುದು ತಪ್ಪಲ್ಲ. ಅವರು ಸಭೆ ಸೇರಿ ಚುನಾವಣೆ ಬಗ್ಗೆ ವಿಶ್ಲೇಷಣೆ ಮಾಡಬಹುದು.
ಈ ಬಗ್ಗೆ ನಾನು ಎಸ್.ಟಿ.ಸೋಮಶೇಖರ್ ಜೊತೆ ಮಾತನಾಡಿದ್ದೇನೆ. ಅವರು ಚುನಾವಣೆ ವಿಶ್ಲೇಷಣೆ ಮಾಡಲು ಸಭೆ ಸೇರುತ್ತಿದ್ದೇವೆ. ಅದು ಸರ್ಕಾರದ ವಿರುದ್ಧವಾಗಲಿ, ಯಾವುದೇ ವ್ಯಕ್ತಿಯ ವಿರುದ್ಧವಾಗಲಿ ಅಲ್ಲ ಎಂದು ಹೇಳಿದ್ದಾರೆ. ಆದರೂ, ಸಭೆಯನ್ನು ಮುಂದೂಡುವಂತೆ ಸೂಚಿಸಿದ್ದೇನೆ ಎಂದರು.