ಕುಂದಾಪುರ: ಬಿಜೆಪಿ ಪರಿವರ್ತನಾ ಯಾತ್ರೆ ಸೋಮವಾರ ಕುಂದಾಪುರಕ್ಕೆ ಆಗಮಿಸಿದ್ದ ವೇಳೆ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಮೂಲ ಬಿಜೆಪಿಗರ ಬಣಗಳ ನಡುವೆ ವಾಗ್ವಾದ ನಡೆದ ಘಟನೆ ನಡೆಯಿತು.
ನಗರದ ನೆಹರೂ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಬಹಿರಂಗವಾಗಿಯೇ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ವಿರುದ್ಧ ಘೋಷಣೆ ಕೂಗಲಾಯಿತು, ಈ ಸಂದರ್ಭದಲ್ಲಿ ಹಾಲಾಡಿ ಅವರ ಬಣ ಬೆಂಬಲ ವ್ಯಕ್ತಪಡಿಸಿದ್ದರಿಂದ ಉಭಯ ಕಾರ್ಯಕರ್ತರ ನಡುವೆ ವಾಕ್ಸಮರ ನಡೆಯಿತು.
ಬ್ಯಾನರ್ ಹಿಡಿದು ಹಾಲಾಡಿ ವಿರುದ್ಧ ಘೋಷಣೆ ಕೂಗಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಲಾಠಿಚಾರ್ಚ್ ಮಾಡಿದ ಘಟನೆ ನಡೆಯಿತು. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ವೇದಿಕೆಯಲ್ಲಿ ಬಹಿರಂಗವಾಗಿಯೇ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಪರ ಮಾತನಾಡುವ ಮೂಲಕ ವಿರೋಧಿ ಬಣಕ್ಕೆ ಬಿಸಿ ಮುಟ್ಟಿಸಿದರು.
ಸಭೆಯಲ್ಲಿ ಗದ್ದಲ, ವಾಕ್ಸಮರ ನಡೆಯುತ್ತಿದ್ದಾಗಲೇ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಬಿಎಸ್ ಯಡಿಯೂರಪ್ಪ, ಹಾಲಾಡಿ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಲಾಡಿಗೆ ವಿರೋಧ ವ್ಯಕ್ತಪಡಿಸುವವರ ವಿರುದ್ಧ ಬಿಎಸ್ ವೈ ತಿರುಗೇಟು ನೀಡಿದರು.
ಹಾಲಾಡಿ ಬೇಕು, ಇಷ್ಟ ಇರೋರು ಇರಿ, ಇಷ್ಟ ಇಲ್ಲದವರು ಹೋಗಬಹುದು ಎಂದು ಬಿಎಸ್ ವೈ ಅವರು ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರೋಧಿ ಬಣಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.