ವಾಡಿ: ಪಟ್ಟಣದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭವೊಂದರಲ್ಲಿ ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಮಾತಿನ ಭರಾಟೆಯಲ್ಲಿ ಸಂಸದ ಡಾ| ಉಮೇಶ ಜಾಧವ ಅವರನ್ನು “ಡ್ರಾಮಾ ಸಂಸದ’ ಎಂದು ಅವಹೇಳನಕಾರಿಯಾಗಿ ಟೀಕಿಸಿದ್ದಕ್ಕೆ ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಶಿವರಾಮ ಪವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ವಿರುದ್ಧ ಅಗೌರವದ ಟೀಕೆ ನಿಲ್ಲಿಸದಿದ್ದರೆ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಟ್ಟಣದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭಕ್ಕೆ ಬಿಜೆಪಿ ಸರ್ಕಾರವೇ ಅನುದಾನ ನೀಡಿದೆ. ಇದಕ್ಕೆ ಸಂಸದರನ್ನು ಆಹ್ವಾನಿಸದೇ ಶಿಷ್ಠಾಚಾರ ಉಲ್ಲಂಘಿಸಿದ್ದಲ್ಲದೇ ಬ್ಯಾನರ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಭಾವಚಿತ್ರವನ್ನು ಮುದ್ರಿಸಿಲ್ಲ. ಕೇವಲ ಅಪ್ಪ, ಮಗನ ಭಾವಚಿತ್ರ ಹಾಕಿಸಿದ್ದಾರೆ. ಬಂಜಾರಾ ಧರ್ಮಗುರು ದಿ. ರಾಮರಾವ್ ಮಹಾರಾಜರ ಹೆಸರಿನ ಪತ್ರ ಇಟ್ಟುಕೊಂಡು ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಬಂಜಾರಾ ಸಮಾಜದ ಕಾಂಗ್ರೆಸ್ ನಾಯಕರಾದ ಬಾಬುರಾವ್ ಚವ್ಹಾಣ, ಸುಭಾಷ ರಾಠೊಡ ಮೂಲಕ ಸಂಸದರ ವಿರುದ್ಧ ಹೇಳಿಕೆ ಕೊಡಿಸಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಾಧವ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಕೇಳುವುದರಲ್ಲಿ ಅರ್ಥವೇ ಇಲ್ಲ. ಡಾ| ಜಾಧವ ಅವರು ಸಂಸದರಾದ ದಿನಗಳಿಂದ ಕೊರೊನಾ ಸೋಂಕು ಬೆನ್ನಟ್ಟಿದೆ. ಆದರೂ ಅವರು ಕೈಕಟ್ಟಿ ಕುಳಿತುಕೊಳ್ಳದೇ ತಾವೇ ಬೆಂಗಳೂರಿಗೆ ಹೋಗಿ ಚುಚ್ಚುಮದ್ದು ತಂದು ಜಿಲ್ಲೆಯ ರೋಗಿಗಳ ಜೀವ ಉಳಿಸುವ ಕೆಲಸ ಮಾಡಿದ್ದಾರೆ ಇಂದು ಕಾಂಗ್ರೆಸ್‌ನವರಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು.
ಸಂಸದರು ಸನ್ನತಿ ಬೌದ್ಧ ತಾಣಕ್ಕೆ ಭೇಟಿ ನೀಡಿದ್ದು ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿದೆ. ಅಧಿಕಾರದಲ್ಲಿದ್ದಾಗ ಸನ್ನತಿ ಅಭಿವೃದ್ಧಿಗೆ ಏನೂ ಮಾಡದವರು, ಜಾಧವ ಅವರಿಗೆ ಆರು ತಿಂಗಳ ಗಡುವು ನೀಡಿದ್ದು ಹಾಸ್ಯಾಸ್ಪದವಾಗಿದೆ. ಆದರೆ ಸಂಸದರ ಅವಧಿ ಮುಗಿಯುವುದರ ಒಳಗೆ ಸನ್ನತಿಗೆ ಸಾಕಷ್ಟು ಅನುದಾನ ಹರಿದುಬರಲಿದೆ ಎಂದರಲ್ಲದೇ ಬುದ್ಧನ ಸ್ಥಳ ವೀಕ್ಷಣೆಯೇ “ಡ್ರಾಮಾ’ ಎಂದಿರುವ ಪ್ರಿಯಾಂಕ್ ಖರ್ಗೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ತಾಲೂಕು ಉಪಾಧ್ಯಕ್ಷ ಗಿರಿಮಲ್ಲಪ್ಪ ಕಟ್ಟಿಮನಿ, ನಗರ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ರಾಹುಲ್ ಸಿಂಧಗಿ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಪುರಸಭೆ ಮಾಜಿ ಸದಸ್ಯ ಕಿಶನ್ ಜಾಧವ, ಮುಖಂಡ ರಿಚ್ಚರ್ಡ್ ಮರೆಡ್ಡಿ ಇದ್ದರು.