ಚಿಕ್ಕಮಗಳೂರು: ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸ್ಪರ್ಧಿಸುತ್ತಿರುವ ಪಕ್ಷ ಸರಿಯಿಲ್ಲ. ಅವರಿಗೆ ಬಿಜೆಪಿ ಅಭ್ಯರ್ಥಿ
ಶೋಭಾ ಕರಂದ್ಲಾಜೆ ಬಗ್ಗೆ ಮಾತನಾಡಲು ಯೋಗ್ಯತೆಯಿಲ್ಲ ಎಂದು ಬಿಜೆಪಿ ವಕ್ತಾರ ಸಿ.ಎಚ್. ಲೋಕೇಶ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷದ ಇಬ್ಬರು ಹೆಂಡಿರ ಮುದ್ಧಿನ ಗಂಡನಾಗಲು ಹೊರಟು ದಿವಾಳಿಯಾಗುತ್ತಾರೆ. ಅವರ ಪಕ್ಷದ ಕಾರ್ಯಕರ್ತರೇ ಅವರ ವಿರುದ್ಧವಾಗಿದ್ದಾರೆ. ಬಹು ಮಹತ್ವದ ಈ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್ ಅವರು ಹರಕೆಯ ಕುರಿ ಆಗುವುದರಲ್ಲಿ ಸಂಶಯವಿಲ್ಲ ಎಂದರು.
ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷ ಸಂಪೂರ್ಣ ಪೂರ್ವ ತಯಾರಿ ನಡೆಸಿದೆ. ಕ್ಷೇತ್ರದಲ್ಲಿ ಮತ್ತೂಮ್ಮೆ ಬಿಜೆಪಿ
ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಶೋಭಾ ಕರಂದ್ಲಾಜೆ ಅವರು ಬಾರಿ ಭಾರೀ ಅಂತರದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಅವರು ಕಳೆದ ಐದು ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಪ್ರಧಾನಿ
ನರೇಂದ್ರ ಮೋದಿ ಅವರ ಸಾಧನೆ ಬಿಜೆಪಿಗೆ ಜನಮನ್ನಣೆ ದೊರೆಯಲಿದೆ. ಮತ್ತೂಮ್ಮೆ ನರೇಂದ್ರ ಮೋದಿ ಅವರು
ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್‌ಗೆ ಬಿಟ್ಟುಕೊಡುವ ಮೂಲಕ
ಕ್ಷೇತ್ರವೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಕ್ತ ಲೋಕಸಭಾ ಕ್ಷೇತ್ರವಾಗಿ ಅವರೇ ಮಾಡಿಕೊಳ್ಳುತ್ತಿದ್ದಾರೆ ಇದು ವಿಪರ್ಯಾಸ ಎಂದರು.
ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣದಿಂದ ಆ ಪಕ್ಷದ ಕಾರ್ಯಕರ್ತರು ಬೇಸತ್ತಿದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಮೂಲೆ ಗುಂಪಾಗುತ್ತಿದ್ದಾರೆ. ಆದ್ದರಿಂದ ಜೆಡಿಎಸ್ ಕಾರ್ಯಕರ್ತರೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಮತ್ತೂಮ್ಮೆ ಅಧಿಕಾರಕ್ಕೆ ತರುವ ಮಾತಗಳನ್ನು ಆಡುತ್ತಿದ್ದಾರೆ ಎಂದರು.
ಬಿಜೆಪಿ ವಕ್ತಾರ ವರಸಿದ್ಧಿವೇಣುಗೋಪಾಲ್ ಮಾತನಾಡಿ, ಇತ್ತೀಚೆಗೆ ಪ್ರಮೋದ್ ಮಧ್ವರಾಜ್ ಜಿಲ್ಲೆಗೆ ಭೇಟಿ ನೀಡಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವಾಗ ಸೂಟ್‌ಕೇಸ್ ಪ್ರದರ್ಶನ ಮಾಡಿದ್ದಾರೆ. ಅದರಲ್ಲಿ ಹಣವಿತ್ತೇ ಎಂಬ
ಅನುಮಾನ ನಮ್ಮನ್ನು ಕಾಡುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ತಮ್ಮಯ್ಯ ಮಾತನಾಡಿ, ಪ್ರಮೋದ್ ಮಧ್ವರಾಜ್ ಅವರಿಗೆ ಬಿಜೆಪಿ
ಅಭ್ಯರ್ಥಿಯ ಬಗ್ಗೆ ಮಾತನಾಡಲು ನೈತಿಕತೆಯಿಲ್ಲ. ಇವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಬ್ರಾಹಂ ಎಂಬುವರು
ಇವರಿಗೆ ಮತಹಾಕಬೇಡಿ ಎಂದು ಸವಾಲು ಹಾಕಿದ್ದಾರೆ. ಮತ್ತು ಮಲ್ಪೆಯ ಬ್ಯಾಂಕ್ ಒಂದರಲ್ಲಿ 193 ಕೋಟಿ ಸಾಲ ಪಡೆದು ಸಾಲ ಮರುಪಾವತಿ ಮಾಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ಅಭ್ಯರ್ಥಿ ಶೋಭಾ ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಅವರ ಬಗ್ಗೆ ಮಾತನಾಡುವ ನೈತಿಕತೆ ಮೈತ್ರಿ ಪಕ್ಷದ ಅಭ್ಯರ್ಥಿಗಿಲ್ಲ ಎಂದರು.
ಮುಖಂಡರಾದ ಬಿ.ರಾಜಪ್ಪ, ಶ್ರೀಕಾಂತ್ ಪೈ, ನಾರಾಯಣ ಗೌಡ, ಪುಟ್ಟೇಗೌಡ ಇದ್ದರು.
ಮಾಜಿ ಪ್ರಧಾನಿ ದಿ| ಇಂದಿರಾಗಾಂಧಿ ಅವರಿಗೆ ಮರುಜನ್ಮ ನೀಡಿದ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದಂತಾಗಿದೆ. ಇದು ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಯನ್ನು ತೋರಿಸುತ್ತದೆ. ಸಂಘಟನೆಯನ್ನೇ ಹೊಂದದ ಜೆಡಿಎಸ್ ಪಕ್ಷಕ್ಕೆ
ಕ್ಷೇತ್ರ ನೀಡಲಾಗಿದೆ. ಆ ಪಕ್ಷದಲ್ಲಿ ಅಭ್ಯರ್ಥಿಯೇ ಇಲ್ಲದೆ ಕಾಂಗ್ರೆಸ್ ಪಕ್ಷದವರನ್ನು ಕಣಕ್ಕಿಳಿಸಲಾಗಿದೆ.
ಸಿ.ಎಚ್.ಲೋಕೇಶ್, ಬಿಜೆಪಿ ವಕ್ತಾರ
ಕ್ಷೇತ್ರ ನೀಡಲಾಗಿದೆ. ಆ ಪಕ್ಷದಲ್ಲಿ ಅಭ್ಯರ್ಥಿಯೇ ಇಲ್ಲದೆ ಕಾಂಗ್ರೆಸ್ ಪಕ್ಷದವರನ್ನು ಕಣಕ್ಕಿಳಿಸಲಾಗಿದೆ.
ಸಿ.ಎಚ್.ಲೋಕೇಶ್, ಬಿಜೆಪಿ ವಕ್ತಾರ