Advertisement

ಜೆಡಿಎಸ್‌ ಶಾಸಕರಿಗೆ 100 ಕೋಟಿ ಆಮಿಷ 

06:00 AM May 17, 2018 | Team Udayavani |

ಬೆಂಗಳೂರು: ಜೆಡಿಎಸ್‌ ಶಾಸಕರಿಗೆ ಬಿಜೆಪಿಯವರು 100 ಕೋಟಿ ರೂ.ಜತೆಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಆಮಿಷವೊಡ್ಡುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅಧಿಕಾರ ಉಳಿಸಿಕೊಳ್ಳಲು 2008ರಲ್ಲಿ ಕುದುರೆ ವ್ಯಾಪಾರ ಮಾಡಿದ್ದ ಬಿಜೆಪಿ ಅನ್ಯ ಪಕ್ಷದ ಶಾಸಕರಿಗೆ 25ರಿಂದ 30 ಕೋಟಿ ರೂ.ಕೊಟ್ಟು ರಾಜೀನಾಮೆ
ಕೊಡಿಸಿದ್ದರು. ಇದೀಗ ಮತ್ತೆ ಆ ಚಾಳಿ ಮುಂದುವರಿಸುತ್ತಿರುವ ಬಿಜೆಪಿ, ಪಕ್ಷದ ಶಾಸಕರನ್ನು ಸೆಳೆಯಲು 100 ಕೋಟಿ ರೂ. ಮತ್ತು ಸಚಿವ ಸ್ಥಾನದ ಆಮಿಷವೊಡ್ಡುತ್ತಿದೆ. ಒಂದು ವೇಳೆ ಆಮಿಷವೊಡ್ಡಿ ಆಪರೇಷನ್‌ ಕಮಲದ ಮೂಲಕ ಅವರನ್ನು ಸೆಳೆದರೆ ಸುಮ್ಮನಿರಲು ನಾವೇನೂ ಸನ್ಯಾಸಿಗಳಲ್ಲ. ಅದರ ಎರಡು ಪಟ್ಟು ಶಾಸಕರನ್ನು ಬಿಜೆಪಿಯಿಂದ ಕರೆತರುವ ಕೆಲಸಕ್ಕೆ ಕೈಹಾಕುತ್ತೇವೆ. ಅನೇಕ ಬಿಜೆಪಿ ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಪ್ರಧಾನಿ ಮೋದಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ, 100 ಕೋಟಿ ರೂ.ಕೊಟ್ಟು ನಮ್ಮ ಪಕ್ಷದ ಶಾಸಕರನ್ನು ಖರೀದಿಸಲು ಅವರ ಪಕ್ಷ ಮುಂದಾಗುತ್ತಿದೆ ಎನ್ನುವುದಾದರೆ ಕಪ್ಪು ಹಣ ಬಿಜೆಪಿಯವರ ಖಜಾನೆಯಲ್ಲೇ ಇದೆ ಎಂಬುದು ಸ್ಪಷ್ಟವಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ದಾಳಿ ನಡೆಸುತ್ತಿದ್ದ ಆದಾಯ ತೆರಿಗೆ ಇಲಾಖೆಯವರು ಈಗೆಲ್ಲಿ ಹೋಗಿದ್ದಾರೆ ಎಂದರು. ಮೋದಿ ಅವರು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸೇರಿ ಸರ್ಕಾರ ರಚಿಸಲು ಅವಕಾಶ ನೀಡುವುದಿಲ್ಲ ಎನ್ನುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಮಿತ್‌ ಶಾ ಈ ಮಾತು ಹೇಳಿದ್ದರೆ ಪರವಾಗಿರಲಿಲ್ಲ
ಎಂದರು. ಅಧಿಕಾರಕ್ಕಾಗಿ ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಜೆಡಿಎಸ್‌ ಸರ್ಕಾರ ರಚಿಸಲು ಬೇಷರತ್‌ ಬೆಂಬಲ ನೀಡುವುದಾಗಿ ಕಾಂಗ್ರೆಸ್‌ನವರೇ ಘೋಷಿಸಿದರು. ಹೀಗಾಗಿ ದೇಶದ ಉಳಿವಿಗಾಗಿ ಇದನ್ನು ಒಪ್ಪಿಕೊಳ್ಳಬೇಕಾಯಿತು ಎಂದು ಸಮಜಾಯಿಷಿ ನೀಡಿದರು.

ಎಚ್‌ಡಿಕೆ-ಜಾಬ್ಡೇಕರ್‌ ಭೇಟಿ?
ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾಬ್ಡೇಕರ್‌ ಭೇಟಿ ಮಾಡಿ ಚರ್ಚಿಸಿದರು ಎಂಬುದು ನಾನಾ ಊಹಾಪೋಹಗಳಿಗೆ ಕಾರಣವಾಗಿತ್ತು. ಬುಧವಾರ ಬೆಳಗ್ಗೆ ಕುಮಾರಸ್ವಾಮಿ ತಂಗಿದ್ದ ಹೋಟೆಲ್‌ಗೆ ಆಗಮಿಸಿದ ಜಾಬ್ಡೇಕರ್‌, ಜೆಡಿಎಸ್‌ ನೇತೃತ್ವದಲ್ಲೇ ಸರ್ಕಾರ ರಚನೆಗೆ ಬಿಜೆಪಿ ಸಿದಟಛಿವಿದೆ. ಕಾಂಗ್ರೆಸ್‌ ಜತೆ ಹೋಗದೆ ಬಿಜೆಪಿ ಜತೆ ಬನ್ನಿ ಎಂದು ಆಹ್ವಾನ ನೀಡಿದರು ಎಂದು ಹೇಳಲಾಗಿದೆ. ಆದರೆ, ಈ ವಿಚಾರದಲ್ಲಿ ಬಹಳ ಮುಂದೆ ಸಾಗಿ ಹೋಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು. ಹೀಗಾಗಿ, ಬಂದ ದಾರಿಗೆ ಸುಂಕ ಇಲ್ಲದಂತೆ ಜಾಬ್ಡೇಕರ್‌ ವಾಪಸ್ಸಾದರು ಎನ್ನಲಾಗಿದೆ. ಆದರೆ, ಜಾಬ್ಡೇಕರ್‌ ಭೇಟಿಯನ್ನು ಕುಮಾರಸ್ವಾಮಿ ಅಲ್ಲಗಳೆದರು. ನನ್ನನ್ನು ಯಾರೂ ಭೇಟಿ ಮಾಡಿಲ್ಲ ಎಂದು ಹೇಳಿದರು. ಈ ಕುರಿತು ಬಿಜೆಪಿ ಕಚೇರಿಯಲ್ಲಿ ಜಾಬ್ಡೇಕರ್‌ ಅವರನ್ನು ಕೇಳಿದಾಗ, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಬೇಕು ಎಂಬುದು ಬಿಜೆಪಿಯವರ ವಾದ. ಆದರೆ,
ಮೇಘಾಲಯ, ಗೋವಾ, ಮಣಿಪುರ ರಾಜ್ಯದಲ್ಲಿ ಬಿಜೆಪಿ ಮಾಡಿರುವುದೇನು ಎಂಬುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿಗೆ
ಬೇಕಾದಂತೆ ಅಲ್ಲೊಂದು ನಿರ್ಣಯ, ಇಲ್ಲೊಂದು ನಿರ್ಣಯವೇ?

● ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next