ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಅಂಫಾನ್ ಚಂಡಮಾರುತದಿಂದ ತೊಂದರೆಗೆ ಸಿಲುಕುವ ಜನರಿಗೆ ಮಾಹಿತಿ ನೀಡಲು ತುರ್ತಾಗಿ ಕಾಲ್ ಸೆಂಟರ್ ಆರಂಭಿಸಬೇಕು.
ಹಾಗೆಯೇ ರಾಜ್ಯಗಳಲ್ಲಿ ಪ್ರಮುಖರ ತಂಡ ರಚಿಸಿ ಜಾಗೃತಿ ಮೂಡಿಸಲು ಮುಂದಾಗುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಕರ್ನಾಟಕ ಸೇರಿ ಏಳು ರಾಜ್ಯಗಳ ಬಿಜೆಪಿ ಅಧ್ಯಕ್ಷರು, ಸಂಘಟನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ಜೆ.ಪಿ. ನಡ್ಡಾ ಹಾಗೂ ಬಿ.ಎಲ್. ಸಂತೋಷ್ ಅವರು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಬಿಜೆಪಿ ಅಧ್ಯಕ್ಷರು ಹಾಗೂ ಸಂಘಟನ ಕಾರ್ಯದರ್ಶಿಗಳೊಂದಿಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿದರು.
ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಅಂಫಾನ್ ಚಂಡಮಾರುತದಿಂದ ಎದುರಾಗಬಹುದಾದ ಅಪಾಯಗಳು ಹಾಗೂ ಆ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ನಿರ್ವಹಿಸಬೇಕಾದ ಜವಾಬ್ದಾರಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಷ್ಟ್ರೀಯ ನಾಯಕರು ವಿವರಿಸಿದರು.
ಪ್ರಮುಖರ ತಂಡ ರಚಿಸಿ ಚಂಡಮಾರುತದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು. ಎಲ್ಲ ರಾಜ್ಯಗಳ ಕರಾವಳಿ ಭಾಗದ ಜನರಲ್ಲಿ ಚಂಡಮಾರುತದ ಅಪಾಯ ಕುರಿತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕೆಂದು ರಾಷ್ಟ್ರೀಯ ನಾಯಕರು, ರಾಜ್ಯಗಳ ಅಧ್ಯಕ್ಷರು ಹಾಗೂ ಸಂಘಟನ ಕಾರ್ಯದರ್ಶಿಗಳಿಗೆ ಸೂಚಿಸಿದರು. ರಾಜ್ಯ ಬಿಜೆಪಿ ಪರವಾಗಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರೊಂದಿಗೆ ರಾಜ್ಯ ಸಂಘಟನ ಕಾರ್ಯದರ್ಶಿಗಳು ವಿಡಿಯೋ ಸಂವಾದಲ್ಲಿ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ರಾಜ್ಯದಲ್ಲಿ ಶೀಘ್ರವೇ ಪ್ರಮುಖರ ತಂಡ ರಚಿಸುವ ಜತೆಗೆ ಚಂಡಮಾರುತದ ಬಗ್ಗೆ ಸಮರ್ಪಕ ಮಾಹಿತಿ ಒದಗಿಸಲು ಕಾಲ್ ಸೆಂಟರ್‌ಗೆ ಚಾಲನೆ ನೀಡುವುದಾಗಿಯೂ ನಳಿನ್ ಹೇಳಿದರು.