Advertisement

ಹರ್ಯಾಣದಲ್ಲಿ ರೈತರ ಪ್ರತಿಭಟನೆ, ಬಿಜೆಪಿ ಸಂಸದರ ಕಾರು ಜಖಂ

04:53 PM Nov 05, 2021 | Team Udayavani |

ಹಿಸಾರ್: ಹರ್ಯಾಣದ ಹಿಸಾರ್ ಜಿಲ್ಲೆಗೆ ಭಾರತೀಯ ಜನತಾ ಪಕ್ಷದ ಸಂಸದ ರಾಮ್ ಚಂದರ್ ಜಂಗ್ರಾ ಶುಕ್ರವಾರ (ನವೆಂಬರ್ 05) ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತರು ಕಪ್ಪು ಬಾವುಟ ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಸಂಸದ ರಾಮ್ ಚಂದರ್ ಕಾರನ್ನು ಜಖಂಗೊಳಿಸಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೊಂದು ಕೊಲೆ ಯತ್ನ ಎಂದು ಸಂಸದರು ಆರೋಪಿಸಿದ್ದಾರೆ. ಸಂಸದ ರಾಮ್ ಚಂದರ್ ಜಂಗ್ರಾ ಅವರ ಕಾರು ಆಗಮಿಸುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ರೈತರು ಕಪ್ಪು

Advertisement

ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದು, ಬ್ಯಾರಿಕೇಡ್ ಹಾಕಲಾಗಿತ್ತು. ಆದರೆ ಅಪಾರ ಪ್ರಮಾಣದಲ್ಲಿ ರೈತರು ಆಗಮಿಸಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿರುವುದಾಗಿ ವರದಿ ತಿಳಿಸಿದೆ.

ನಾನು ಒಂದು ಸಮಾರಂಭದಲ್ಲಿ ಭಾಗವಹಿಸಿ ಮತ್ತೊಂದು ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕೆಲವು ಜನರು ಕಾರಿನತ್ತ ಲಾಠಿಯನ್ನು ಎಸೆದಿದ್ದರು. ಇದರ ಪರಿಣಾಮ ಕಾರು ಜಖಂಗೊಂಡಿತ್ತು. ಆದರೆ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಜಂಗ್ರಾ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.

ಈ ಘಟನೆ ಸಂಬಂಧ ನಾನು ಡಿಜಿಪಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತನಾಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ. ಇದೊಂದು ಕೊಲೆ ಯತ್ನವಾಗಿದೆ ಎಂದು ಜಂಗ್ರಾ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next