ಹೊಸದಿಲ್ಲಿ : “ಸೇನೆಯಲ್ಲಿರುವವರು ಸಾಯಲೆಂದೇ ಇರುವವರು’ ಎಂದು ಭಾರತೀಯ ಜನತಾ ಪಕ್ಷದ ಸಂಸದ ನೇಪಾಲ್ ಸಿಂಗ್ ಹೇಳಿದ್ದು ಅವರ ಈ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
“ಪ್ರಪಂಚದಲ್ಲಿ ಸೈನಿಕರು ಸಾಯದೇ ಇರುವ ಯಾವುದಾದರೊಂದು ದೇಶ ಇದೆಯೇ ? ಒಂದೊಮ್ಮೆ ಅಂತಹ ದೇಶವೊಂದಿದ್ದರೆ ಅದು ಯಾವುದೆಂದು ನನಗೆ ತಿಳಿಸಿ ನೋಡೋಣ” ಎಂದು ಬಿಜೆಪಿ ನಾಯಕ ಹೇಳಿದರು. ಅವರು ಕಳೆದ ಭಾನುವಾರ ಜಮ್ಮು ಕಾಶ್ಮೀರದಲ್ಲಿನ ಸಿಆರ್‌ಪಿಎಫ್ ಶಿಬಿರದ ಮೇಲೆ ನಡೆದ ಉಗ್ರ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾದ ಘಟನೆಗೆ ಪ್ರತಿಕ್ರಿಯೆ ನೀಡುತ್ತಿದ್ದರು.
“ರಣರಂಗದ ಮಾತು ಹಾಗಿರಲಿ; ಗ್ರಾಮವೊಂದರಲ್ಲಿ ಗಲಭೆ, ಕಾದಾಟ ನಡೆದಾಗ ನಡೆದಾಗ ಯಾರಾದರೂ ಸಾಯುತ್ತಾರೆ; ಮನುಷ್ಯನನ್ನು ಸಾಯದೇ ಉಳಿಸುವಂತಹ ಯಾವುದಾದರೂ ಔಷಧಿ ಇದೆಯೇ, ಹೇಳಿ’ ಎಂದು ನೇಪಾಲ್ ಸಿಂಗ್ ತಮ್ಮನ್ನು ಸಮರ್ಥಿಸಿಕೊಂಡರು. ಜಮ್ಮು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ನಡೆದ ಉಗ್ರ ದಾಳಿಯಲ್ಲಿ ಐವರು ಯೋಧರು ಮೃತಪಟ್ಟದ್ದೇಕೆ ಎಂಬ ಪ್ರಶ್ನೆಯಿಂದ ಸಿಟ್ಟಿಗೆದ್ದ ಸಿಂಗ್ ಈ ರೀತಿಯ ಉತ್ತರ ನಿಡುತ್ತಿದ್ದರು.
“ಯಾವುದೇ ಪರಿಣಾಮ ಉಂಟು ಮಾಡದ ಬುಲೆಟ್‌ಗಳು ಇವೆಯೇ ಹೇಳಿ ನೋಡೋಣ; ಅಂಥದ್ದೇನಾದರೂ ಇದ್ದರೆ ನಾವೇ ಮೊದಲು ಅವುಗಳನ್ನು ಬಳಸುತ್ತೇವೆ’ ಎಂದು ನೇಪಾಲ್ ಸಿಂಗ್ ತಮ್ಮ ಹೇಳಿಕೆಗೆ ಚಿತ್ರ ವಿಚಿತ್ರ ಸಮರ್ಥನೆಯನ್ನು ನೀಡತೊಡಗಿದರು.
ಸೈನಿಕರು ಸಾಯಲೆಂದೇ ಇರುವವರು ಎಂಬ ತನ್ನ ಹೇಳಿಕೆಯಿಂದ ಉಂಟಾದ ಆಕ್ರೋಶಕ್ಕೆ ಉತ್ತರವಾಗಿ ಸಿಂಗ್, “ನಾನು ಹುತಾತ್ಮ ಸೈನಿಕರನ್ನು ಅವಮಾನಿಸಲು ಹಾಗೆ ಹೇಳಿಲ್ಲ; ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದರು.
“ಹುತಾತ್ಮ ಸೈನಿಕರ ತ್ಯಾಗವು ಎಂದೂ ನಿಷ್‌ಫಲವಾಗದು; ಅವರು ತೋರಿರುವ ಧೈರ್ಯ, ಸ್ಥೈರ್ಯ, ಹಾಗೂ ವೀರತನಕ್ಕೆ ಸೂಕ್ತ ಗೌರವ ಕೊಡಲಾಗುವುದು’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನಿನ್ನೆ ಸೋಮವಾರ ಹೇಳಿದ್ದರು. ಅದಾದ ನಂತರದಲ್ಲಿ ಸಿಂಗ್ ಅವರ ಪ್ರತಿಕ್ರಿಯೆ ಬಂದಿದೆ.
ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ ಮಾಡಿದ್ದ ಎಲ್ಲ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.