ಕೊಪ್ಪಳ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ನಾಳೆ ಸಮಯ ನಿಗದಿಯಾಗಿದ್ದು ಅವರ ಭೇಟಿ ಬಳಿಕ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ಳುವೆ ಎಂದು ಬಿಜೆಪಿ ಸಂಸದ ಸಂಗಣ್ಣ ಕರಡಿ ಹೇಳಿದರು
ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಹಾಗೂ ಡಿಸಿಎಂ ಭೇಟಿಗೆ ನನ್ನ ಆತ್ಮೀಯ ಮಿತ್ರರೂ ಆದ ಶಾಸಕ ಲಕ್ಷ್ಮಣ ಸವದಿ ವ್ಯವಸ್ಥೆ ಮಾಡಿದ್ದಾರೆ
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಕೂಡ ಮಾತನಾಡಿದ್ದು, ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಸಿಎಂ, ಡಿಸಿಎಂ ಜತೆ ಚರ್ಚಿಸಿ ನನ್ನ ನಿರ್ಣಯ ಹೇಳುತ್ತೇನೆ. ನನ್ನ ಬೇಡಿಕೆ ಏನೆಂಬುದನ್ನು ನಿಮ್ಮ ಮುಂದೆ ಹೇಳುವುದಿಲ್ಲ ಎಂದರು.
ಜನಾರ್ದನ ರೆಡ್ಡಿ ಅವರನ್ನು ಹೊರತುಪಡಿಸಿ ಬಿಜೆಪಿಯ ಯಾವ ನಾಯಕರೂ ಸಂಪರ್ಕದಲ್ಲಿ ಇಲ್ಲ. ಕಾಂಗ್ರೆಸ್ ಸೇರ್ಪಡೆ ತೀರ್ಮಾನದ ಬಳಿಕ ಯಾರೆಲ್ಲ ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸುವೆ ಎಂದು ಹೇಳಿದರು
ಸಂಸದರ ಮನೆಗೆ ರಾಜೇಖರ ಹಿಟ್ನಾಳ್ ಭೇಟಿ : ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಂಗಳವಾರ ಸಂಸದ ಸಂಗಣ್ಣ ಅವರ ಮನೆಗೆ ಭೇಟಿ ನೀಡಿ ಚರ್ಚಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ ಸಂಗಣ್ಣ ಕರಡಿ ಅವರು ನನಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಅವರು, ಪಕ್ಷ ಸೇರಿದರೆ ದೊಡ್ಡ ಬಲ ಬರಲಿದೆ ಎಂದರು.
ಸಂಗಣ್ಣ ಕರಡಿ ಅವರು ನನಗೆ ತಂದೆ ಸಮಾನರು. ರಾಜ್ಯ ನಾಯಕರ ಜತೆ ಚರ್ಚಿಸಿ ಕಾಂಗ್ರೆಸ್ ಸೇರುವ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದರು.