ನವದೆಹಲಿ: ರಾಜಸ್ಥಾನದ ಭಾರತ್ ಪುರ್ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಸಂಸದೆ ರಂಜಿತಾ ಕೋಲಿ ಮೇಲೆ ಗುರುವಾರ (ಮೇ 27) ರಾತ್ರಿ ಅಪರಿಚಿತ ದುಷ್ಕರ್ಮಿಗಳು ಕಾರಿನ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಭಾರತ್ ಪುರ್ ನ ಧಾರ್ಸೋನಿ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಸದೆಯ ಕಾರಿನ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬೈಕ್ ನಲ್ಲಿ ಹೋಗುತ್ತಿದ್ದ ಯುವಕನಿಗೆ ಲಾಠಿ ಏಟು: ಯುವಕ ಆಸ್ಪತ್ರೆಗೆ,ಪಿಸಿಐ ವಿರುದ್ಧ ಆಕ್ರೋಶ
ಗುರುವಾರ ತಡರಾತ್ರಿ 11.30ರ ಸುಮಾರಿಗೆ ಭಾರತ್ ಪುರ್ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳುತ್ತಿದ್ದಾಗ ಕನಿಷ್ಠ ಐದು ಮಂದಿ ಅಪರಿಚಿತ ದುಷ್ಕರ್ಮಿಗಳು ರಂಜಿತಾ ಕೋಲಿ ಅವರ ಕಾರಿನ ಮೇಲೆ ಕಲ್ಲು ಮತ್ತು ಕಬ್ಬಿಣದ ಸರಳುಗಳಿಂದ ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.
ಸಂಸದೆ ರಂಜಿತಾ ಕೋಲಿ ಅವರ ಕಾರನ್ನು ಅಡ್ಡಗಟ್ಟಿದ ನಂತರ ಕಲ್ಲುಗಳಿಂದ ದಾಳಿ ನಡೆಸಿ, ಕಾರಿನ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು. ಘಟನೆಯಿಂದ ಹೆದರಿಕೆಗೊಳಗಾದ ಕೋಲಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ವರದಿ ತಿಳಿಸಿದೆ.
ಘಟನೆಯಲ್ಲಿ ಕೋಲಿ ಹಾಗೂ ಕಾರಿನಲ್ಲಿದ್ದವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲವಾಗಿತ್ತು, ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಯಿತು ಎಂದು ವರದಿ ತಿಳಿಸಿದೆ.