Advertisement

ಮಹದಾಯಿ ವಿಚಾರ ಪ್ರಸ್ತಾಪಿಸದ ಬಿಜೆಪಿ ಸಂಸದ, ಸಚಿವರು

12:59 PM Feb 06, 2018 | Team Udayavani |

ಕೆಂಗೇರಿ: ಮಹದಾಯಿ ವಿಚಾರವಾಗಿ ರಾಜ್ಯದ ಬಿಜೆಪಿ ಸಂಸದರು, ಕೇಂದ್ರ ಸಚಿವರು ರಾಜ್ಯದ ರೈತರಿಗೆ ದ್ರೋಹವೆಸಗುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಆರೋಪಿಸಿದರು. ಕಗ್ಗಲಿಪುರ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್‌ ಸಮಿತಿ ಕಗ್ಗಲೀಪುರದಲ್ಲಿ ಆಯೋಜಿಸಿದ್ದ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸಚಿವರಾಗಲಿ
ಸಂಸದರಾಗಲಿ ಮಹದಾಯಿ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುತ್ತಿಲ್ಲ. ಅಲ್ಲದೆ ಪ್ರಧಾನಿ ಮಧ್ಯ ಪ್ರವೇಶಕ್ಕೂ ಒತ್ತಡ ಹೇರುವಲ್ಲಿ ವಿಫ‌ಲರಾಗಿದ್ದಾರೆ ಎಂದು ಟೀಕಿಸಿದರು.

Advertisement

ಕಾಂಗ್ರೆಸ್‌ನವರು ದೇಶಕ್ಕೆ ಏನೂ ಕೊಡುಗೆ ನೀಡಿಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆಗೆ ಕಾಂಗ್ರೆಸ್‌ ಸರ್ಕಾರ ಪ್ರೋತ್ಸಾಹ ನೀಡಿದ್ದರ ಫ‌ಲವಾಗೇ ಇಂದು ಈ ಕ್ಷೇತ್ರಗಳಲ್ಲಿ ಭಾರತ ವಿಶ್ವದ ಗಮನ ಸೆಳೆದಿದೆ. ಪ್ರಧಾನಿ ಮೋದಿ ಅವರು ಇಂದು ಡಿಜಿಟಲ್‌ ಮಂತ್ರ ಜಪಿಸುತ್ತಿದ್ದಾರೆ. ಆದರೆ, ದೇಶ ಇಂದು ಡಿಜೀಟಲೀಕರಣದ ಹಾದಿಯಲ್ಲಿದೆ ಎಂದರೆ, ಅದಕ್ಕೆ ಕಾರಣ ಕಾಂಗ್ರೆಸ್‌ ಪಕ್ಷ ಪ್ರತಿಪಾದಿಸಿದ ಉದಾರೀಕರಣ ಹಾಗೂ ಜಾಗತೀಕರಣ ನೀತಿಗಳು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ಮಂತ್ರದಂಡದಿಂದ ಇವೆಲ್ಲವನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ಇದನ್ನು ಪ್ರಧಾನಿ ಹಾಗೂ ಎಲ್ಲ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು. ಜಿ.ಪಂ ಸದಸ್ಯ ಫ‌ರ್ವೇಜ್‌, ಶಾಸಕ ಎಸ್‌.ಟಿ.ಸೋಮಶೇಖರ್‌, ವಿಧಾನ ಪರಿಷತ್‌ ಸದಸ್ಯ ಎಂ.ನಾರಾಯಣ ಸ್ವಾಮಿ, ತಾ.ಪಂ ಸದಸ್ಯರಾದ ಎಂ.ಮಹದೇವ್‌, ಪವನ್‌ ಕುಮಾರ್‌, ಶ್ರೀನಿವಾಸ್‌ ಇತರರಿದ್ದರು.

ಪ್ರಧಾನಿ ಮಧ್ಯಸಿಕೆಗೆ ಒತ್ತಾಯ
ಬೆಂಗಳೂರು: ಮಹದಾಯಿ ನದಿ ನೀರಿನ ಹಂಚಿಕೆ ವಿವಾದವನ್ನು ನ್ಯಾಯಾಧೀಕರಣದ ಹೊರಗೆ ಇತ್ಯರ್ಥಪಡಿಸಲು ಪ್ರಧಾನಿ ಮಧ್ಯಪ್ರವೇಶ ಮಾಡುವಂತೆ ಕಮ್ಯುನಿಸ್ಟ್‌ ಪಕ್ಷದ ರಾಷ್ಟ್ರೀಯ ಮಂಡಳಿಯ ಸದಸ್ಯ ಪಿ.ವಿ.ಲೋಕೇಶ್‌ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋವಾದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಒಂದು ವೇಳೆ ಪ್ರಧಾನಿ ಈ ವಿಚಾರದಲ್ಲಿ ಕರ್ನಾಟಕವನ್ನು ಬೆಂಬಲಿಸಿದರೆ ಗೋವಾ ಸರ್ಕಾರ ಪತನವಾಗಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಮಹದಾಯಿ ನದಿ ನೀರಿನ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳುವ ಸಂಬಂಧ ಬಿಜೆಪಿ, ಕಾಂಗ್ರೆಸ್‌ ಮುಖಂಡರು ಮೂರು ರಾಜ್ಯಗಳಲ್ಲಿ ತಮ್ಮ ಪಕ್ಷಗಳ ಪದಾಧಿಕಾರಿಗಳ ಸಭೆ ನಡೆಸಿ ಸಹಮತಕ್ಕೆ ಬರಬೇಕು ಎಂದರು.

ರಾಜ್ಯಸರ್ಕಾರ ಈಗಾಗಲೇ ರೈತರ ಸಾಲ ಮನ್ನಾ ಮಾಡಿದೆ, ಅದೇ ರೀತಿಯಲ್ಲಿ ಕೇಂದ್ರ ಸರ್ಕಾರವು ಕೂಡ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅನುದಾನ ಕಡಿತ ಹಿಂಪಡೆದು ಹೆಚ್ಚಿನ ಅನುದಾನ ಬಿಡುಗಡೆಗೆ ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next