ಹೊಸದಿಲ್ಲಿ : ಮಹಿಳೆಯೊಬ್ಬಳು ನನಗೆ ಬಲವಂತದಿಂದ ಮಾದಕ ದ್ರವ್ಯವನ್ನು ತಿನ್ನಿಸಿ ಅಮಲು ಬರಿಸಿ ಆಕ್ಷೇಪಾರ್ಹ ಅಶ್ಲೀಲ ರೀತಿಯಲ್ಲಿ ನನ್ನ ವಿಡಿಯೋ ಚಿತ್ರವನ್ನು ಮಾಡಿ ಈಗ ನನ್ನಿಂದ ಐದು ಕೋಟಿ ರೂ.ಸುಲಿಗೆ ಮಾಡುವುದಕ್ಕಾಗಿ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಗುಜರಾತ್ನ ಬಿಜೆಪಿ ಸಂಸದ ಕೆ ಸಿ ಪಟೇಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಸದ ಪಟೇಲ್ ಅವರು ನೀಡಿರುವ ದೂರಿನ ಪ್ರಕಾರ ತನಿಖೆ ಆರಂಭಿಸಿರುವ ದಿಲ್ಲಿ ಪೊಲೀಸರು, ಇದೀಗ ಆರೋಪಿ ‘ಹೈ ಪ್ರೊಫೈಲ್’ ಮಹಿಳೆಯ ಶೋಧಕ್ಕಾಗಿ ವ್ಯಾಪಕ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
5 ಕೋಟಿ ರೂ. ಪಾವತಿಸದೇ ಹೋದಲ್ಲಿ ನಿಮ್ಮ ಅಶ್ಲೀಲ ಫೋಟೋಗಳನ್ನು ಹಾಗೂ ಸೆಕ್ಸ್ ವಿಡಿಯೋವನ್ನು ಬಿಡುಗಡೆ ಮಾಡಲಾಗುವುದು ಎಂದು ಸಂಸದ ಪಟೇಲ್ ಅವರಿಗೆ ಆರೋಪಿ ಮಹಿಳೆಯ ಗ್ಯಾಂಗ್ನವರು ಬೆದರಿಕೆ ಹಾಕಿರುವುದಾಗಿ ವರದಿಗಳು ತಿಳಿಸಿವೆ.
ಮಾತ್ರವಲ್ಲದೆ ಪಟೇಲ್ ಅವರನ್ನು ರೇಪ್ ಕೇಸಿನಲ್ಲಿ ತಾನು ಸಿಕ್ಕಿಸಿಹಾಕುವುದಾಗಿಯೂ ಮಹಿಳೆ ಬೆದರಿಕೆ ಹಾಕಿದ್ದಾಳೆ.
ಪಟೇಲ್ ಅವರು ತಮ್ಮ ದೂರಿನಲ್ಲಿ ಹೇಳಿರುವಂತೆ, ಮಹಿಳೆಯು ನನ್ನಿಂದ ಸ್ವಲ್ಪ ಸಹಾಯವನ್ನು ಯಾಚಿಸಿದಳು; ಗಾಜಿಯಾಬಾದ್ನ ಮನೆಗೆ ತನ್ನೊಂದಿಗೆ ಬರುವಂತೆ ಕೇಳಿಕೊಂಡಳು; ಆ ಪ್ರಕಾರ ನಾನು ಅವಳ ಜತೆಗೆ ಅಲ್ಲಿಗೆ ಹೋದಾಗ ಅಲ್ಲಿ ನನಗೆ ಬಲವಂತವಾಗಿ ತಂಪು ಪಾನೀಯಕ್ಕೆ ಅಮಲು ಪದಾರ್ಥ ಬೆರೆಸಿ ಕುಡಿಸಲಾಯಿತು ಎಂದು ದೂರಿದ್ದಾರೆ.
ಸಂಸದ ಪಟೇಲ್ ಅವರು ನನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ದೂರಿರುವುದಾಗಿಯೂ ವರದಿಯಾಗಿದೆ.