Advertisement

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

07:09 PM Mar 28, 2024 | Team Udayavani |

ವಿಜಯಪುರ : ಬಂಜಾರ ಸಮಾಜದ ಕುರಿತು ಅತ್ಯಂತ ಕೀಳಾಗಿ ಮಾತನಾಡಿರುವ ಸಂಸದರೂ ಆಗಿರುವ ವಿಜಯಪುರ ಮೀಸಲು ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿಕೆಯನ್ನು ಬಂಜಾರ ಸಮಾಜ ಖಂಡಿಸಿದೆ. ಅಲ್ಲದೇ ಚುನಾವಣೆಯಲ್ಲಿ ಜಿಣಜಿಣಗಿಗೆ ಬಂಜಾರ ಸಮಾಜ ಮತ ಹಾಕದಂತೆ ನಿರ್ಧರಿಸಿದ್ದಾಗಿ ಹೇಳಿದೆ.

Advertisement

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಂಸದ ರಮೇಶ ಜಿಗಜಿಣಗಿ ಹೇಳಿಕೆಯನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ ಅಖಿಲ ಕರ್ನಾಟಕ ಬಂಜಾರಾ ಮಹಾಸಭಾ ಅಧ್ಯಕ್ಷ ಅರ್ಜುನ ರಾಠೋಡ,  ಸಮಾಜದ ಬಗ್ಗೆ ಕೀಳಾಗಿ ಮಾತನಾಡಿರುವುದನ್ನು ಖಂಡಿಸುತ್ತೇವೆ ಎಂದರು.

11 ಬಾರಿ ಚುನಾವಣೆಯಲ್ಲಿ ಗೆದ್ದಿರುವ ಜಿಗಜಿಣಗಿ ಅವರು ನಮ್ಮ ಸಮಾಜದ ಬಗ್ಗೆ ಅಪಮಾನ, ಸೊಕ್ಕಿನ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ವಿಜಯಪುರ ಮೀಸಲು ಕ್ಷೇತ್ರದ ಬಂಜಾರರ ಪ್ರತಿ ಮನೆ ಮನೆಗೆ ತೆರಳಿ ನಮ್ಮ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿರುವ ಜಿಗಜಿಣಗಿ ಅವರಿಗೆ ಮತ ಹಾಕದಂತೆ ಮನವಿ ಮಾಡುತ್ತೇವೆ ಎಂದರು.

ಬಂಜಾರ ಸಮಾಜದವರು ಬಿಜೆಪಿ ಪಕ್ಷದಿಂದ ತಮ್ಮ ಸಮುದಾಯದ ಡಾ.ಬಾಬುರಾಜೇಂದ್ರ ನಾಯಕಗೆ ಟಿಕೆಟ್ ಕೊಡುವಂತೆ ಆಗ್ರಹಿಸಿ, ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದು ಆ ಪಕ್ಷದ ಆಂತರಿಕ ವಿಷಯವೇ ಆದರೂ, ನಮ್ಮ ಸಮಾಜದ ವೋಟ್ ಕೇಳಿದೆವಾ ಎಂಬ ಹೇಳಿಕೆ ಮೂಲಕ ಜಿಗಜಿಣಗಿ ಅಪಮಾನ ಮಾಡಿದ್ದಾರೆ ಎಂದರು.

ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಂಜಾರಾ ಸಮಾಜದ ಜನರು ತಮ್ಮ ಸಮಾಜದ ನಾಯಕನಿಗಾಗಿ ಹಕ್ಕು ಕೇಳಿದ್ದಾರೆ. ಇದನ್ನು ವಿರೋಧಿಸುವ ಭರದಲ್ಲಿ ಬಿಜೆಪಿ ಘೋಷಿತ ಅಭ್ಯರ್ಥಿಯೂ ಆಗಿರುವ ಸಂಸದ ರಮೇಶ ಜಿಗಜಿಣಗಿ ಬಂಜಾರ ಸಮುದಾಯದ ಮತವನ್ನೇ ಕೇಳುವುದಿಲ್ಲ ಎಂದು ಅವಮಾನ ಮಾಡಿದ್ದಾರೆ ಎಂದು ಹರಿಹಾಯ್ದರು.

Advertisement

ರಾಜ್ಯದಲ್ಲಿ 5 ಸಾವಿರ ತಾಂಡಾ ಇದ್ದು, ವಿಜಯಪುರದಲ್ಲಿ  518 ತಾಂಡಾ 2.40 ಲಕ್ಷ ಮತಗಳಿವೆ. ಸಮಾಜವನ್ನು ಅವಮಾನಿಸಿರುವ ಜಿಗಜಿಣಗಿ ಅವರಿಗೆ ಬಂಜಾರಾ ಸಮಾಜದ ಯಾರೂ ಮತ ಹಾಕಬಾರದು ಎಂದು ನಿರ್ಣಯಿಸಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷ ವಿಜಯಪುರ ಮೀಸಲು ಕ್ಷೇತ್ರವಾದ ಬಳಿಕ ಎರಡು ಬಾರಿ ಹಾಗೂ ಸಾಮಾನ್ಯ ಕ್ಷೇತ್ರವಾಗಿದ್ದಾಗಲೂ ಪ್ರಕಾಶ ರಾಠೋಡ ಅವರಿಗೆ ಮೂರು ಬಾರಿ ಅವಕಾಶ ನೀಡಿದರೂ ನಾವು ಗೆಲ್ಲಲಾಗಿಲ್ಲ. ಆದರೆ ಬಂಜಾರ ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಬಂಜಾರ ಸಮಾಜ ಬದ್ಧತೆ ತೋರಲಿದೆ ಎಂದರು.

ಜಿಗಜಿಣಗಿ ಹೇಳಿದ್ದೇನು?
ಬಿಜೆಪಿ ಬಂಡುಕೋರ ಡಾ.ಬಾಬು ರಾಜೇಂದ್ರ ನಾಯಿಕ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ”ಬಂಜಾರ ಸಮಾಜದವರಿಗೆ ವೋಟ್ ಹಾಕಂತ ನಾವೇನು ಕೇಳಿದೆವಾ, ಯಾರಿಗಾದ್ರೂ ವೋಟ್ ಹಾಕಲಿ. ನಮ್ಮೂರಾವಲ್ಲ, ಏನಲ್ಲ, ಅವನು ಎಲ್ಲೋ ತಾಂಡಾದವನು ಇಲ್ಲಿ ಬಂದು ಇಲ್ಲೇನು ರಾಜಕಾರಣ ಮಾಡತಾನ್ರಿ ಅಂತಾ ಸ್ಪಷ್ಟವಾಗಿ ಜನರೇ ಹೇಳುತ್ತಿದ್ದಾರೆ” ಎಂದು ಜಿಗಜಿಣಗಿ ಟೀಕಿಸಿದ್ದರು.

ಬ್ಯಾರೇ ಜಿಲ್ಲೆದವನು ಇಲ್ಲಿ ಬಂದು ಏನ ಮಾಡತಾನ್ರಿ. ಪ್ರತಿಭಟನೆ ಹಣಕೊಟ್ಟು ಜನರನ್ನು ಕರೆತಂದು ನಡೆಸಿದ ಹೋರಾಟ. ಹೋರಾಟಕ್ಕೆ ಬಂದ ತಾಂಡಾದವರನ್ನು ಕೇಳಿದರೆ ನಮಗ ಒಂದೂವರೆ ಸಾವಿರ ರೂಪಾಯಿ ಕೊಟ್ರು, ಅದಕ್ಕ ಹೋಗಿದ್ವಿ ಅಂತಾರೆ ಎಂದು ಜಿಗಜಿಣಗಿ ಹಠಾವೋ, ಬಿಜೆಪಿ ಬಚಾವೋ ಹೋರಾಟ ನಡೆಸಿದ ಬಂಜಾರಾ ಸಮುದಾಯದ ಕೆಲವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಖರ್ಗೆ ಅವರ ಕ್ಷೇತ್ರ ಕಲಬುರಗಿಯಲ್ಲಿ ಬಂಜಾರ ಸಮಾಜದ ನಾಯಕ ಡಾ. ಉಮೇಶ್ ಜಾಧವ್ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಸಮಾಜಕ್ಕೆ ಮನ್ನಣೆ ನೀಡಿದೆ. ನಾವು ವಿಜಯಪುರದಲ್ಲೂ ನಿಮಗೆ ಮತ ಹಾಕಿ ಗೆಲ್ಲಿಸುತ್ತೇವೆ ಎಂದು ಬಂಜಾರ ತಾಂಡಾದ ಜನರು ನನಗೆ ಹೇಳಿದ್ದಾರೆ ಎಂದು ಸುದ್ದಿಗಾರರ ಎದುರು ಜಿಗಜಿಣಗಿ ಕಿಡಿ ಕಾರಿದ್ದರು.

ಜಿಗಜಿಣಗಿ ನೀಡಿರುವ ಹೇಳಿಕೆಗೆ ಬಂಜಾರಾ ಸಮಾಜದ ಹಲವು ಮುಖಂಡರು ಭಾರಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next