Advertisement

ಭೂಪಿಂದರ್ ಸಿಂಗ್ ಹೂಡಾ ವರ್ತನೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

02:44 PM Mar 12, 2021 | Girisha |

ಬೆಂಗಳೂರು : ಮಹಿಳೆಯರಿಗೆ ಅವಮಾನ ಮಾಡಿದ ಭೂಪಿಂದರ್ ಸಿಂಗ್ ಹೂಡಾ ವರ್ತನೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಇಂದು(ಮಾರ್ಚ್ 12) ಪ್ರತಿಭಟನೆ ನಡೆಸಲಾಯಿತು.

Advertisement

ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಆಶಾ ರಾವ್ ಅವರು ಮಾತನಾಡಿ, ಹರಿಯಾಣದ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ತಾವು ಟ್ರ್ಯಾಕ್ಟರ್‍ನಲ್ಲಿ ಚಾಲಕನ ಸ್ಥಾನದಲ್ಲಿ ಕುಳಿತುಕೊಂಡು, ಅದನ್ನು ಎಳೆಯಲು ಮಹಿಳಾ ಶಾಸಕಿಯರನ್ನು ಬಳಸಿಕೊಂಡಿದ್ದಾರೆ. ಇದು ಮಹಿಳಾ ದಿನಾಚರಣೆಯಂದೇ ನಡೆದಿದೆ. ಮಹಿಳೆಯರನ್ನು ತಾಯಿಯ ಸ್ಥಾನದಲ್ಲಿ ನೋಡುವ ಸಂಸ್ಕೃತಿ ಭಾರತೀಯರದ್ದು. ಕಾಂಗ್ರೆಸ್ ಮುಖಂಡರು ಮಹಿಳೆಗೆ ಮಾಡಿದ ಅವಮಾನವನ್ನು ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದರು.

ಮಹಿಳೆಯರನ್ನು ಅಪಮಾನ ಮಾಡಿದ ಕಾಂಗ್ರೆಸ್ ಪಕ್ಷದವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಇಂಥ ಘಟನೆಗಳು ಮರುಕಳಿಸಬಾರದು ಎಂದು ಒತ್ತಾಯಿಸಿದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದೇ ಮಹಿಳೆಯರನ್ನು ಜೀತದಾಳುಗಳಂತೆ ಬಳಸಿಕೊಂಡ ಹೂಡಾ ಅವರ ವರ್ತನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದೂ ಅವರು ತಿಳಿಸಿದರು.

“ಡೌನ್ ಡೌನ್ ಕಾಂಗ್ರೆಸ್”, “ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿ”, “ಮಹಿಳೆಯರನ್ನು ಅವಮಾನ ಮಾಡಿದ ಹೂಡಾಗೆ ಧಿಕ್ಕಾರ”- ಮೊದಲಾದ ಘೋಷಣೆಗಳನ್ನು ಕೂಗಲಾಯಿತು. ಕಾರ್ಯಕರ್ತೆಯರು “ಭಾರತ್ ಮಾತಾಕಿ ಜೈ” “ವಂದೇ ಮಾತರಂ” ಘೋಷಣೆಯನ್ನೂ ಕೂಗಿದರು. ಬೆಂಗಳೂರು ದಕ್ಷಿಣ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಆನಂದ್, ಉತ್ತರ ಮತ್ತು ದಕ್ಷಿಣ, ಕೇಂದ್ರ ಜಿಲ್ಲೆಗಳ ಕಾರ್ಯಕರ್ತೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next