ಭದ್ರಾವತಿ: ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯವಾಗಿದ್ದಾರೆ. ಸೂರ್ಯ- ಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಮೋದಿ ಮತ್ತೂಮ್ಮೆ ಪ್ರಧಾನಿ ಆಗುತ್ತಾರೆ ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ಭಾನುವಾರ ರಾತ್ರಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುತ್ವದ ಹೆಸರು ಹೇಳಿಕೊಂಡು ಅಪ್ಪ- ಮಕ್ಕಳಾದ ನಮ್ಮನ್ನು ಟೀಕಿಸುತ್ತಾರಲ್ಲ. ನಾವೇನು ದ್ರೋಹ ಮಾಡಿದ್ದೆವು. ಚುನಾವಣೆ ನಂತರ ನಡೆಯುವ ವಿಜಯೋತ್ಸವದಿಂದ ಅವರಿಗೆ ತಕ್ಕ ಉತ್ತರ ದೊರೆಯಲಿ. ಟೀಕಿಸುವವರು ನಮಗೆ
ಹಿಂದುತ್ವದ ಪಾಠ ಮಾಡಬೇಕಾಗಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಅವರ ಹೆಸರೆತ್ತದೆ ಹೇಳಿದರು.
ಬೆಂಗಳೂರಿನಲ್ಲಿರುವ ಶಿವಮೊಗ್ಗ ಜಿಲ್ಲೆಯ ಯುವ ಮತದಾರರು ಸೇರಿದಂತೆ 50 ಸಾವಿರಕ್ಕೂ ಅಧಿಕ ಮತದಾರರಿಗಾಗಿ ಏ. 14 ರಂದು ಅರಮನೆ ಮೈದಾನ ಗೇಟ್ ನಂ.3 ರಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು ಎಂದರು.
ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಬಿಜೆಪಿ ದೇಶಕ್ಕಾಗಿ ರಕ್ತ ಬಸಿದ ಪಕ್ಷವಾಗಿದೆ. ಪಕ್ಷದ ಕಾರ್ಯಕರ್ತರು ಸ್ವಾಭಿಮಾನದ ಕಾರ್ಯ ಪಡೆಯಾಗಿದೆ. ಮೋದಿ ಅವರು ಶ್ರೀರಾಮ ಮಂದಿರ, ಕಾಶಿ ಅಭಿವೃದ್ಧಿ ಮಾಡಿ ಆಯಿತು. ಇನ್ನು ಉಳಿದದ್ದು ಮಥುರಾ ದೇವಾಲಯ ಮತ್ತು ಕಾಮನ್ ಸಿವಿಲ್ ಕೋಡ್ ಆಗಬೇಕಾಗಿದೆ ಎಂದರು.
ಚಿಕ್ಕಮಗಳೂರಿನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಅಧ್ಯಕ್ಷ ಧರ್ಮಪ್ರಸಾದ್, ಮುಂಗೋಟೆ ರುದ್ರೇಶ್, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ತಾಲೂಕು ಅಧ್ಯಕ್ಷ ಆರ್.ಕರುಣಾಮೂರ್ತಿ ಮಾತನಾಡಿದರು.