Advertisement

K.G.ಹಳ‍್ಳಿ ಗಲಭೆ: ಗೋಲಿಬಾರಿನಲ್ಲಿ ಸತ್ತವರನ್ನು ಅಮಾಯಕರೆಂದ ಶಾಸಕ ಜಮೀರ್ ನಡೆಯೇ ಸಂಶಯಾಸ್ಪದ

09:47 PM Aug 13, 2020 | Hari Prasad |

ಬೆಂಗಳೂರು: ತನ್ನದೇ ಪಕ್ಷದ ದಲಿತ ಶಾಸಕರ ಮೇಲೆ ನಡೆದಿರುವ ಅನ್ಯಾಯವನ್ನು ಖಂಡತುಂಡವಾಗಿ ಖಂಡಿಸುವ ಧೈರ್ಯ ಕಾಂಗ್ರೆಸ್ ಪಕ್ಷಕ್ಕೆ ಯಾಕಿಲ್ಲ ಎಂದು ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಶಾಸಕ ರವಿಕುಮಾರ್ ಎನ್. ಅವರು ರಾಜ್ಯ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

Advertisement

ಇನ್ನೊಂದೆಡೆ, ಗೊಲೀಬಾರ್ ನಲ್ಲಿ ಪ್ರಾಣಕಳೆದುಕೊಂಡವರು ಅಮಾಯಕರೆಂದು ಶಾಸಕ ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಬೇಜವಬ್ದಾರಿಯ ಪರಮಾವಧಿಯದ್ದಾಗಿದೆ ಎಂದು ರವಿಕುಮಾರ್ ಅವರು ಟೀಕಿಸಿದ್ದಾರೆ.

ಶಾಸಕ ಜಮೀರ್ ಅವರ ಈ ಹೇಳಿಕೆಯನ್ನು ಖಂಡಿಸುತ್ತಾ, ಜಮೀರ್ ಖಾನ್ ಅವರ ನಡೆಯ ಬಗ್ಗೆಯೇ ತಮಗೆ ಸಂಶಯ ಮೂಡುತ್ತಿದೆ ಎಂದು ರವಿಕುಮಾರ್ ಅವರು ನೇರ ಆರೋಪವನ್ನು ಮಾಡಿದ್ದಾರೆ.

ಪುಲಕೇಶಿನಗರದ ಕಾಂಗ್ರೆಸ್ ಪಕ್ಷದ ದಲಿತ ಸಮುದಾಯಕ್ಕೆ ಸೇರಿದ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ಸಮಾಜಘಾತುಕ ಪುಂಡರು ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ಇಷ್ಟೂ ಸಾಲದೆಂಬಂತೆ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯ ಪೊಲೀಸ್ ಠಾಣೆಯ ಮೇಲೆ ಕಲ್ಲೆಸೆದು, ಪೊಲೀಸ್ ವಾಹನಗಳಿಗೆ, ಬೆಂಕಿ ಹಚ್ಚಿದ್ದಾರೆ.

ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಎಸೆದು, ಬಾಟಲಿ, ಕಲ್ಲುತೂರಾಟ ಮಾಡಿ ಪುಂಡರು ಬಹುದೊಡ್ಡ ದೊಡ್ಡ ದಾಂಧಲೆ ಮಾಡಿ ಸುಮಾರು 30ಕ್ಕಿಂತ ಹೆಚ್ಚು ಜನ ಪೊಲೀಸರು ಗಾಯಗೊಳ್ಳಲು ಕಾರಣರಾಗಿದ್ದಾರೆ, ನೂರಾರು ವಾಹನಗಳು ಭಸ್ಮವಾಗಿವೆ. ಇನ್ನೊಂದೆಡೆ ಮಾಧ್ಯಮ ಪ್ರತಿನಿಧಿಗಳ ಮೇಲೆಯೂ ಹಲ್ಲೆ ನಡೆದಿದೆ.

Advertisement

ಹೀಗೆ ರಾಜಾರೋಷವಾಗಿ ಸಾರ್ವಜನಿಕ ಆಸ್ತಿಪಾಸ್ತಿಯನ್ನು ನಾಶ ಮಾಡಿ ದುಂಡಾವರ್ತನೆ ನಡೆಸಿರುವ ಕಿಡಿಗೇಡಿಗಳ ಪರ ಶಾಸಕ ಜಮೀರ್ ಅವರು ವಕಾಲತ್ತು ವಹಿಸುವುದರ ಹಿಂದಿರುವ ಉದ್ದೇಶ ಏನು ಎಂದು ಶಾಸಕ ರವಿಕುಮಾರ್ ಅವರು ಪ್ರಶ್ನೆಗಳ ಸುರಿಮಳೆಯನ್ನೇ ಮಾಡಿದ್ದಾರೆ.

ಸಮಾಜ ಘಾತುಕ ಪುಂಡರನ್ನು ಹಿಮ್ಮೆಟ್ಟಿಸಲು ಪೊಲೀಸರು ಬಲಪ್ರಯೋಗ ನಡೆಸಿದಾಗ ಅವರ ಗುಂಡಿಗಡ ಮೂವರು ಅಸುನೀಗಿದ್ದಾರೆ. ಆದರೆ ಹೀಗೆ ಸತ್ತವರು ಅಮಾಯಕರೆಂದು ಕಾಂಗ್ರೆಸ್ ಶಾಸಕ ಜಮೀರ್ ಖಾನ್ ಬೇಜವಬ್ದಾರಿತನದಿಂದ ಹೇಳಿರುವುದು ಖಂಡನೀಯ.

ಹೀಗೆ ಏಕಪಕ್ಷೀಯವಾಗಿ ಹೇಳಲು ಜಮೀರ್ ಅಹ್ಮದ್ ಖಾನ್ ಅವರೇನು ತನಿಖಾಧಿಕಾರಿಯೇ? ಗಲಭೆಯಲ್ಲಿ ಸತ್ತವರು ‘ಅಮಾಯಕರೆಂಬ’ ಪ್ರಮಾಣಪತ್ರವನ್ನು ನೀಡಲು ಇವರು ಯಾರು? ಇದನ್ನೆಲ್ಲ ನೋಡಿದಾಗ ಜಮೀರ್ ಅವರ ವರ್ತನೆಯೇ ಸಂಶಯದಿಂದ ಕೂಡಿದಂತೆ ಕಾಣುತ್ತಿದೆ ಎಂದು ರವಿಕುಮಾರ್ ಅವರು ಕಿಡಿಕಾರಿದ್ದಾರೆ.

ಈ ಹಿಂದೆ ಪಾದರಾಯನಪುರದಲ್ಲಿ ಗಲಭೆ ಮಾಡಿ ಜೈಲಿಗೆ ಹೋಗಿಬಂದವರನ್ನು ನೀವು ಯಾವ ರೀತಿ ಸ್ವಾಗತ ಮಾಡಿದ್ದೀರಿ ಎನ್ನುವುದು ಗೊತ್ತು. ಇಂತಹ ಪುಂಡರನ್ನು ಪರೋಕ್ಷವಾಗಿ ಓಲೈಸುವ ಮತ್ತು ಬೆಂಬಲಿಸುವ ರಾಜಕಾರಣ ಮಾಡುವುದನ್ನು ಜಮೀರ್ ಖಾನ್ ಮೊದಲು ಬಿಡಬೇಕು. ಮತ್ತು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿರುವ ಜಮೀರ್ ಅಹ್ಮದ್ ಖಾನ್ ಅವರನ್ನು ಶಾಸಕ ಸ್ಥಾನದಿಂದ ಮಾತ್ರವಲ್ಲದೇ ಕಾಂಗ್ರೆಸ್ ತನ್ನ ಪಕ್ಷದಿಂದಲೇ ವಜಾ ಮಾಡಬೇಕೆಂದು ನಾನು ಕಾಂಗ್ರೆಸ್ ನಾಯಕರಲ್ಲಿ ಆಗ್ರಹಿಸುತ್ತೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ಶಾಸಕರ ಮೇಲೆ ನಡೆದಿರುವ ದಾಳಿಯನ್ನು ಖಂಡಿಸುವ ‍ಧೈರ್ಯ ಆ ಪಕ್ಷಕ್ಕೆ ಮತ್ತು ಅಲ್ಲಿನ ನಾಯಕರಿಗೆ ಇಲ್ಲವೆಂದಾದರೆ ಇದೊಂದು ದುರಂತವೇ ಸರಿ. ಈ ಘಟನೆಯ ದಾಳಿಕೋರರ ವಿರುದ್ಧ ಕಾಂಗ್ರೆಸ್ ನಾಯಕರು ಯಾಕೆ ಧ್ವನಿ ಎತ್ತುತ್ತಿಲ್ಲ? ಓಲೈಕೆ ರಾಜಕಾರಣಕ್ಕಾಗಿಯೇ? ನಿಮ್ಮ ಮತಬ್ಯಾಂಕ್ ಕೈ ತಪ್ಪುತ್ತದೆಯೇ ಎಂಬ ಭಯವೇ?

ಕಾಂಗ್ರೆಸ್ ಪಕ್ಷದ ನಾಯಕರು ಭಂಡತನವನ್ನು ಬಿಟ್ಟು ದಲಿತರ ಪರವಾಗಿ, ನ್ಯಾಯದ ಪರ ಧ್ವನಿಯಾಗಬೇಕೆಂದು ನಾನು ಈ ಸಂದರ್ಭದಲ್ಲಿ ಆಗ್ರಹಿಸುತ್ತೇನೆ ಎಂದು ರವಿಕುಮಾರ್ ಹೇಳಿದ್ದಾರೆ.

ರಾಜ್ಯ ಸರ್ಕಾರಕ್ಕೆ ಅಭಿನಂದನೆ:
ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದುಷ್ಕರ್ಮಿಗಳನ್ನು ಈಗಾಗಲೇ ಪತ್ತೆ ಮಾಡಿ ಬಂಧಿಸಿದ್ದಾರೆ. ಪೊಲೀಸರು ಇನ್ನು ಪುಂಡರನ್ನು ಪತ್ತೆ ಹಚ್ಚುತ್ತಿದ್ದಾರೆ. ಈ ಸಮಾಜಘಾತುಕರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್ ರವರಿಂದ ಸಮಗ್ರ ತನಿಖೆಗೆ ಆದೇಶಿಸಿರುವುದನ್ನು ನಾನು ಸ್ವಾಗತಿಸಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next