Advertisement
ಅಧಿವೇಶನ ಆರಂಭಕ್ಕೂ ಮುನ್ನ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸುವ ಚಿಂತನೆ ಬಗ್ಗೆ ಚರ್ಚೆ ನಡೆದಿರಲಿಲ್ಲ. ಆದರೆ ಮುಖ್ಯಮಂತ್ರಿಗಳು ಬಹುಮತ ಸಾಬೀತಿಗೆ ಅವಕಾಶ ಕೋರುವ ಬಗ್ಗೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಕಚೇರಿಯಲ್ಲೇ ಹಿರಿಯ ನಾಯಕರೊಂದಿಗೆ ಚರ್ಚಿಸಿ ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಲು ನಿರ್ಧರಿಸಿದರು ಎಂದು ಮೂಲಗಳು ಹೇಳಿವೆ.
Related Articles
Advertisement
ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಸ್ಪೀಕರ್ 10 ಮಂದಿಯನ್ನು ಅನರ್ಹಗೊಳಿಸುವಂತಿಲ್ಲ ಹಾಗೂ ಆ ವಿಚಾರ ಕುರಿತು ಚರ್ಚೆ ನಡೆಸುವಂತಿಲ್ಲ. ವಿಪ್ ಜಾರಿ ಮಾಡಿದರೂ ಅದು ಅನ್ವಯವಾಗುವುದಿಲ್ಲ. ರಾಜೀನಾಮೆ ಕುರಿತು ವಿಚಾರಣೆ ಕೂಡ ನಡೆಸುವಂತಿಲ್ಲ. ಸುಪ್ರೀಂ ಕೋರ್ಟ್ ಮಂಗಳವಾರ ನೀಡುವ ಆದೇಶವನ್ನು ಕಾದು ನೋಡಲಾಗುವುದು. ಮುಖ್ಯಮಂತ್ರಿಗಳು ವಿಶ್ವಾಸ ಮತ ಯಾಚಿಸುವ ಇಂಗಿತ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಂದಿನ ನಡೆಯನ್ನು ನಿರ್ಧರಿಸಲಾಗಿದೆ.
ವಿಶ್ವಾಸ ಮತ ಯಾಚನೆಯನ್ನು ನಾವು ಎದುರಿಸುವ ಪ್ರಶ್ನೆಯೇ ಇಲ್ಲ. ಶಾಸಕರೆಲ್ಲಾ ಒಟ್ಟಿಗೆ ಇರುವುದಾಗಿ ಹೇಳಿದ್ದರಿಂದ ಒಟ್ಟಿಗೆ ಇರಲು ಸೂಚಿಸಿದ್ದೇನೆ. ಅದರಂತೆ ರೆಸಾರ್ಟ್‌ಗೆ ಹೋಗುತ್ತಿದ್ದಾರೆ ಎಂದು ತಿಳಿಸಿದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮುಖ್ಯಮಂತ್ರಿಗಳು ಅಗತ್ಯಬಿದ್ದರೆ ಬಹುಮತ ಸಾಬೀತುಪಡಿಸಲು ಅವಕಾಶ ಕೋರುವುದಾಗಿ ಹೇಳಿರುವುದು ಸರಿಯಲ್ಲ. ಅವರಿಗೆ ಧೈರ್ಯವಿದ್ದರೆ ಇಂದೇ ಬಹುಮತ ಸಾಬೀತಿಗೆ ಅವಕಾಶ ಮಾಡಿಕೊಡಿ ಎಂದು ಕೇಳಬೇಕಿತ್ತು.
ಸರ್ಕಾರಕ್ಕೆ ಬಹುಮತವಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಅವರಿಗೊಂದು ಸವಾಲು ಹಾಕುತ್ತೇನೆ. ಅವರ ಶಾಸಕರನ್ನು ಕರೆದು ಒಂದು ಸಭೆ ಮಾಡಲಿ. ಆ ಮೇಲೆ ಅವರು ಬಹುಮತದ ಬಗ್ಗೆ ಯೋಚಿಸಲಿ. ಸರ್ಕಾರಕ್ಕೆ ಬಹುಮತ ಇಲ್ಲದಿರುವ ಬಗ್ಗೆ ಸೋಮವಾರ ಸದನದಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನ ಶುಕ್ರವಾರದ ಆದೇಶದಿಂದ ಮೈತ್ರಿ ಸರ್ಕಾರ ನಿರಾಳವಾಗಿದೆ ಎನ್ನಲಾಗುತ್ತಿದೆ. ಸುಪ್ರೀಂ ಕೋರ್ಟ್‌ಗೆ ಯಾರು ಬೇಕಾದರೂ ಹೋಗಬಹುದು. ಹಾಗಿದ್ದರೂ ಸ್ಪೀಕರ್ ರಾಜೀನಾಮೆ ನೀಡಿದ ಶಾಸಕರನ್ನು ಸುಪ್ರೀಂ ಕೋರ್ಟ್‌ಗೆ ಯಾಕೆ ಹೋಗಿದ್ದೀರಿ ಎಂದು ಕೇಳಿದ್ದಾರಂತೆ. ಇದು ಒಂದು ರೀತಿಯಲ್ಲಿ ಧಮ್ಕಿ ಹಾಕಿದ್ದಾರೆ ಎನಿಸುತ್ತದೆ ಎಂದು ತಿಳಿಸಿದರು.
ಬಿಜೆಪಿ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ!: ಮುಖ್ಯಮಂತ್ರಿಗಳು ವಿಶ್ವಾಸ ಮತ ಯಾಚನೆಗೆ ಮುಂದಾದರೆ ನಾವೂ ಸಿದ್ಧರಿದ್ದೇವೆ. ಕಳೆದ ಒಂದು ತಿಂಗಳಿನಿಂದ ಮೈತ್ರಿ ಪಕ್ಷಗಳ ಕೆಲವರು ನಮ್ಮ ಶಾಸಕರನ್ನು ಸಂಪರ್ಕ ಮಾಡುತ್ತಿದ್ದಾರೆ. ವಿಶ್ವಾಸ ಮತ ಯಾಚನೆ ವೇಳೆಗೆ ನಮ್ಮ ಎಲ್ಲ ಶಾಸಕರು ಸರಿಯಾದ ಸಮಯಕ್ಕೆ ಹಾಜರಿರಬೇಕು. ಸಮಯ ಪಾಲನೆಗಾಗಿ ಒಟ್ಟಿಗೆ ಇರಲು ರೆಸಾರ್ಟ್‌ಗೆ ಹೋಗುತ್ತಿದ್ದೇವೆ. ಪಕ್ಷೇತರ ಶಾಸಕರ ಬೆಂಬಲವೂ ನಮಗಿದೆ. ನಾನು ಮುಂಬೈಗೆ ಹೋಗಿದ್ದು ಪಕ್ಷೇತರರ ಭೇಟಿಗೆ ಹೊರತು ಬೇರೆ ಯಾರನ್ನೂ ಭೇಟಿಯಾಗಲು ಹೋಗಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.
ದಿಢೀರ್ ನಿರ್ಧಾರ: ಪಕ್ಷದ ಶಾಸಕರನ್ನು ರೆಸಾರ್ಟ್‌ನಲ್ಲಿರಿಸುವ ಉದ್ದೇಶವಿರಲಿಲ್ಲ. ಮುಖ್ಯಮಂತ್ರಿಗಳ ಅನಿರೀಕ್ಷಿತ ನಡೆಯಿಂದಾಗಿ ಪಕ್ಷದ ಶಾಸಕರನ್ನೆಲ್ಲಾ ಒಟ್ಟಿಗೆ ಇರಿಸಿ ಒಗ್ಗಟ್ಟು ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ. 75ಕ್ಕೂ ಹೆಚ್ಚು ಶಾಸಕರು ಬಸ್‌ನಲ್ಲಿ ಬಂದಿದ್ದಾರೆ. ಹಿರಿಯ ನಾಯಕರನ್ನು ಹೊರತುಪಡಿಸಿ ಉಳಿದ ಶಾಸಕರು ರೆಸಾರ್ಟ್‌ನಲ್ಲಿ ಇರಲಿದ್ದಾರೆ ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದರು.