Advertisement

“ಲುಕ್‌ಔಟ್‌’ಅಸ್ತ್ರ; ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ನೋಟಿಸ್‌ ಜಾರಿ ಸಾಧ್ಯತೆ

10:25 PM Mar 05, 2023 | Team Udayavani |

ಬೆಂಗಳೂರು: ಶಾಸಕ ಮಾಡಾಳು ವಿರೂಪಾಕ್ಷಪ್ಪ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್‌ ಹೋರಾಟ ತೀವ್ರಗೊಳಿಸಿದೆ. ಪ್ರಕರಣ ಬೆಳಕಿಗೆ ಬಂದು 2 ದಿನ ಕಳೆದರೂ ಆರೋಪಿ ಶಾಸಕ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ “ಲುಕ್‌ಔಟ್‌’ ನೋಟಿಸ್‌ ಜಾರಿಗೊಳಿಸಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದೀಗ ಈ ಪ್ರಕರಣ ಬಿಜೆಪಿಗೆ “ಮಗ್ಗುಲ ಮುಳ್ಳು’ ಆಗಿ ಪರಿಣಮಿಸಿದೆ.

Advertisement

ಕಾಂಗ್ರೆಸ್‌ನ ಹೋರಾಟದ ತಂತ್ರ ಮತ್ತು ಲೋಕಾಯುಕ್ತರ ಕಾನೂನು ಅಸ್ತ್ರಕ್ಕೆ ಪ್ರತಿತಂತ್ರ ಹೆಣೆದು, ಚುನಾವಣ ಹೊಸ್ತಿಲಲ್ಲಿ ಪಕ್ಷ ಮತ್ತು ಸರಕಾರಕ್ಕೆ ಆಗಿರುವ ಮತ್ತು ಮುಂದೆ ಆಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಈ ಸಂಬಂಧ ರಾಜ್ಯ ಚುನಾವಣ ಉಸ್ತುವಾರಿ ಧಮೇಂದ್ರ ಪ್ರಧಾನ್‌ ಶನಿವಾರ ತಡರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರೊಂದಿಗೆ ಸಭೆ ನಡೆಸಿದ್ದು, ಸೋಮವಾರದ ಬೆಳವಣಿಗೆ ಗಮನಿಸಿ ಪರಿಸ್ಥಿತಿ ಪ್ರತಿಕೂಲವಾಗಿ ಮುಂದುವರಿದ್ದರೆ ವಿರೂಪಾಕ್ಷಪ್ಪ ಅವರ ರಾಜೀನಾಮೆ ಪಡೆದುಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಧಾನ್‌ ಅಖಾಡಕ್ಕಿಳಿದಿದ್ದೇಕೆ?
ಲುಕ್‌ಔಟ್‌ ನೋಟಿಸ್‌ ಜಾರಿ ಬಳಿಕ ವಿರೂಪಾಕ್ಷಪ್ಪ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದರೆ ಸರಕಾರ ಮತ್ತು ಗೃಹ ಇಲಾಖೆಯ ಕಾರ್ಯವೈಖರಿ ಬಗ್ಗೆ ಇನ್ನಷ್ಟು ಪ್ರಶ್ನೆಗಳು ಏಳಬಹುದು. ನಿರೀಕ್ಷಣಾ ಜಾಮೀನಿಗೆ ಕೋರ್ಟ್‌ ಮೊರೆ ಹೋಗಿ ಅಲ್ಲಿಯೂ ಯಶಸ್ಸು ಸಿಗದಿದ್ದರೆ ಬಂಧನ ಅನಿವಾರ್ಯವಾಗಲಿದೆ. ಇದೆಲ್ಲಾ ನಡೆಯುವ ಮೊದಲೇ ರಾಜೀನಾಮೆ ಪಡೆದುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯಗಳು ಬಿಜೆಪಿ ಮಟ್ಟದಲ್ಲಿ ಕೇಳಿ ಬರುತ್ತಿವೆ ಎನ್ನಲಾಗಿದ್ದು, ಅದೇ ಕಾರಣಕ್ಕೆ ರಾಜ್ಯ ಚುನಾವಣೆಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಅಖಾಡಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.

ದಾವಣಗೆರೆಯಲ್ಲಿ
ಮಾಡಾಳು?
ಪ್ರಕರಣದಲ್ಲಿ ಶಾಸಕ ಮೊದಲ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೀವ್ರಗೊಂಡಿದ್ದು, ಬಂಧಿಸಲು 7 ತಂಡ ರಚಿಸಲಾಗಿದೆ. ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆ ಶೋಧ ಕಾರ್ಯ ನಡೆಸಿದೆ. ಮತ್ತೊಂದೆಡೆ ವಿಚಾರಣೆಗೆ ಹಾಜರಾಗುವಂತೆ ವಿರೂಪಾಕ್ಷಪ್ಪಗೆ ನೋಟಿಸ್‌ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಬೆಂಗಳೂರಿನ ಸಂಜಯ ನಗರದಲ್ಲಿರುವ ನಿವಾಸ, ದಾವಣಗೆರೆ ನಿವಾಸ, ಶಾಸಕರ ಭವನ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿ. ಕಚೇರಿಗೆ ನೋಟಿಸ್‌ ಅಂಟಿಸುವ ಸಾಧ್ಯತೆಗಳಿವೆ. ಇದೇ ವೇಳೆ ಅವರು ದಾವಣಗೆರೆಯಲ್ಲಿ ಸ್ನೇಹಿತರೊಬ್ಬರ ಮನೆಯಲ್ಲಿ ಇದ್ದಾರೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ.

ವಿರೂಪಾಕ್ಷಪ್ಪ 3 ದಿನಗಳ ಹಿಂದೆ ಚಿತ್ರದುರ್ಗ ಗಡಿ ಭಾಗಗಳಲ್ಲಿ ಪಕ್ಷದ ಮುಖಂಡರಿಗೆ ಕೊನೆಯ ಕರೆ ಮಾಡಿದ್ದರು. ಸೋಮವಾರ ಲೋಕಾಯುಕ್ತ ವಿಶೇಷ ಕೋರ್ಟ್‌ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳೂ ಕೇಳಿ ಬಂದಿವೆ. ಆರೋಗ್ಯ ಸಮಸ್ಯೆ ನೆಪದಲ್ಲಿ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ತೆರೆಮರೆಯಲ್ಲೇ ಕಸರತ್ತು ನಡೆಸುತ್ತಿದ್ದಾರೆನ್ನಲಾಗಿದೆ.

Advertisement

ಜಪ್ತಿ ಮಾಡಿರುವ ದಾಖಲೆಗಳ ಪೈಕಿ ಕೋಟ್ಯಂತರ ರೂ. ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಮುಂದಿಟ್ಟುಕೊಂಡು ವಿರೂಪಾಕ್ಷಪ್ಪ ವಿಚಾರಣೆ ನಡೆಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇದರ ನಡುವೆ ಬ್ಯಾಂಕ್‌ ಖಾತೆಗಳನ್ನು ಫ್ರೀಜ್‌ ಮಾಡಲು ಮುಂದಾಗಿದ್ದಾರೆ.

ರಾಜ್ಯ ಬಂದ್‌ಗೆ ಕಾಂಗ್ರೆಸ್‌ ಕರೆ
ಇತ್ತ ವಿರೂಪಾಕ್ಷಪ್ಪ ಅವರ ಬಂಧನ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ಶನಿವಾರ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಿತ್ತು. ಈಗ ಮಾರ್ಚ್‌ 9ರಂದು 2 ತಾಸುಗಳ ಕಾಲ ರಾಜ್ಯ ಬಂದ್‌ಗೆ ಕಾಂಗ್ರೆಸ್‌ ಕರೆ ಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಬೆಳಗ್ಗೆ 9ರಿಂದ 11ರ ವರೆಗೆ ರಾಜ್ಯಾದ್ಯಂತ ವ್ಯಾಪಾರ- ವಹಿವಾಟು, ಉದ್ಯಮ ಮತ್ತಿತರ ಚಟುವಟಿಕೆಗಳನ್ನು ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಿ ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ. ಸಾರಿಗೆ ವ್ಯವಸ್ಥೆ, ಆಸ್ಪತ್ರೆಗಳ ಸೇವೆಯಲ್ಲಿ ವ್ಯತ್ಯಯ ಆಗುವುದಿಲ್ಲ. ಶಾಲಾ-ಕಾಲೇಜುಗಳು ಕೂಡ ಎಂದಿನಂತೆ ಇರಲಿವೆ ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next