ವಿಧಾನಸಭೆ: ಅವಾಸ್ತವಿಕ ತೆರಿಗೆ ನಿರೀಕ್ಷೆ ಮಾಡಿರುವ ರಾಜ್ಯ ಸರ್ಕಾರ, ಸಾಲ ಹೆಚ್ಚಳ ಮಾಡಿಕೊಂಡು ಬಂಡವಾಳ ವೆಚ್ಚ ಕಡಿಮೆ ಮಾಡಲಿದೆ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, 14 ಬಾರಿ ಬಜೆಟ್ ಮಂಡಿಸಿದ ಅನುಭವವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿನ ಸರ್ಕಾರವನ್ನು 37 ಕಡೆ ತೆಗಳಿದ್ದಾರೆ. ಈ ರಾಜಕೀಯ ಭಾಷಣವನ್ನು ಖಂಡಿಸುತ್ತೇನೆ ಎಂದರು.
ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸಿದಾಗ 63,320 ಕೋಟಿ ರೂ. ಜಿಎಸ್‌ಟಿ ಸಂಗ್ರವಾಗುವ ನಿರೀಕ್ಷೆ ಮಾಡಿದ್ದರೆ, ನೀವೀಗ 76,150 ಕೋಟಿ ರೂ. ನಿರೀಕ್ಷಿಸಿದ್ದೀರಿ. 17 ಸಾವಿರ ಕೋಟಿ ರೂ. ಇದ್ದ ಮುದ್ರಾಂಕ ಮತ್ತು ನೋಂದಣಿ ಶುಲ್ಕದ ನಿರೀಕ್ಷೆಯು 25 ಸಾವಿರ ಕೋಟಿ ರೂ.ಗೆ ಏರಿದೆ. 9007 ಕೋಟಿ ರೂ. ಇದ್ದ ಸಾರಿಗೆ ತೆರಿಗೆ 11,500 ಕೋಟಿ ರೂ.ಗೆ ಹೆಚ್ಚಳವಾಗಿದೆ. ಮುಂದಿನ 8 ತಿಂಗಳಲ್ಲಿ ಇಷ್ಟೆಲ್ಲ ತೆರಿಗೆ ಸಂಗ್ರಹವಾಗಲು ಸಾಧ್ಯವಿದೆಯೇ? ಇದು ಮುಂದಿನ ದಿನಗಳಲ್ಲಿ ಸಾಲ ಹೆಚ್ಚಿಸಿಕೊಳ್ಳುವ ತಂತ್ರವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ನಮ್ಮ ಅತ್ಯುತ್ತಮ ಅಡಳಿತಕ್ಕೆ ಇಲ್ಲಿವೆ ಸಾಕ್ಷಿ: 2008-13 ರವರೆಗೆ ಶೇ.108.85 ರಷ್ಟಿದ್ದ ತೆರಿಗೆ ಪ್ರಮಾಣವು 2016-17ರಲ್ಲಿ ಶೇ.67ಕ್ಕೆ ಕುಸಿದಿತ್ತು. 2018ರಲ್ಲಿ 2.27 ಲಕ್ಷ ರೂ. ಇದ್ದ ತಲಾದಾಯ ಈಗ 3.01 ಲಕ್ಷ ರೂ. ಆಗಿದೆ. ಇದು ಹೇಗೆ ಸಾಧ್ಯವಾಯಿತು? ಹಿಂದೆಲ್ಲ ಮಾಸಿಕ ಜಿಎಸ್‌ಟಿ ಸಂಗ್ರಹದ ಪ್ರಮಾಣವು 7345 ಕೋಟಿ ರೂ. ಇತ್ತು. 2023ರಲ್ಲಿ 14,593 ಕೋಟಿ ರೂ.ಗೆ ಏರಿಕೆ ಆಗಿದೆ. 2013-18 ರವರೆಗೆ 20 ಬಿಲಿಯನ್ ಡಾಲರ್‌ನಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಆಗಿತ್ತು. 2021-22 ರಲ್ಲಿ 22.01 ಬಿಲಿಯನ್ ಡಾಲರ್ ಬಂದಿದೆ. ನಿಮ್ಮ 5 ವರ್ಷದಲ್ಲಿ ಬಂದ ಎಫ್ಡಿಐ ನಮ್ಮ ಆಡಳಿತದ ಒಂದೇ ವರ್ಷದಲ್ಲಿ ಬಂದಿದೆ. ಹೂಡಿಕೆಸ್ನೇಹಿ, ಜನಸ್ನೇಹಿ, ಸೌಹಾರ್ದ ರಾಜ್ಯ ಎಂಬ ಕಾರಣಕ್ಕೇ ಇಷ್ಟು ಹಣ ಬಂದದ್ದು. ಹಿಂದೆ ಸಿಎಂ ಬಜೆಟ್ ಮಂಡಿಸುವಾಗ ವಿಧಾನಸೌಧದಲ್ಲಿ ವಿದ್ಯುತ್ ಇಲ್ಲದೆ ಟಾರ್ಚ್ ಇಟ್ಟುಕೊಂಡಿದ್ದರು. ವಿದ್ಯುತ್ ಉತ್ಪಾದನೆ ಏರಿಕೆ ಆಗಿರುವುದೂ ಹೂಡಿಕೆ ಹೆಚ್ಚಲು ಕಾರಣವಾಗಿದೆ ಎಂದು ಸಮರ್ಥಿಸಿಕೊಂಡರು.
ಪರಿಶಿಷ್ಟರ ಹಣ ಕಿತ್ತುಕೊಂಡಿದ್ದೀರಿ
ಪರಿಶಿಷ್ಟ ಜಾತಿ ಮತ್ತು ಸಮುದಾಯದವರ ಕಲ್ಯಾಣಕ್ಕೆ ಇಂತಿಷ್ಟು ಹಣ ಖರ್ಚು ಮಾಡಬೇಕೆಂದು ಕಾನೂನು ಇದೆ. ಎಸ್‌ಸಿಪಿ, ಟಿಎಸ್‌ಟಪಿಗೆ 24 ಸಾವಿರ ರೂ. ಇಟ್ಟಿದ್ದ ಅನುದಾನದಲ್ಲಿ 11,057 ಕೋಟಿ ರೂ.ಗಳನ್ನು 5 ಗ್ಯಾರಂಟಿ ಜಾರಿಗಾಗಿ ವರ್ಗಾವಣೆ ಮಾಡಲಾಗಿದೆ. ಇದು ಯಾವ ಸೂತ್ರ? ಅವರ ತಟ್ಟೆಯಿಂದ ಎತ್ತಿ ಅವರ ಬಾಯಿಗೇ ಅನ್ನ ಇಡುವುದಾ? ಯಾರ ಹಣ ಕಸಿದಿದ್ದೀರಿ? ಅವರನ್ನು ಮೇಲೆತ್ತುವ ಪ್ರಾಮಾಣಿಕ ಪ್ರಯತ್ನವಾ ಇದು? ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದರು.