Advertisement

ಬಿಜೆಪಿಯ ಸಣ್ಣ ಗಾಯ ಗ್ಯಾಂಗ್ರೀನ್‌ ಆಗದಿರಲಿ

03:45 AM Feb 03, 2017 | Team Udayavani |

ಹುಬ್ಬಳ್ಳಿ: “ಬಿಜೆಪಿ ನಾಯಕರಿಬ್ಬರ ಭಿನ್ನಾಭಿಪ್ರಾಯದಿಂದ ಆದ ಬೀದಿ ರಂಪ ಪಕ್ಷ ದೃಷ್ಟಿಯಿಂದ ಸಣ್ಣ ಗಾಯ. ಆದರೆ, ಇದು ಸಹಸ್ರಾರು ಕಾರ್ಯಕರ್ತರಿಗೆ ನೋವು ತರಿಸಿದೆ. ಲಕ್ಷಾಂತರ ಜನರ ಭಾವನೆಗಳನ್ನು ಘಾಸಿಗೊಳಿಸಿದೆ. ಸಣ್ಣ ಗಾಯ ಮಾಯಬೇಕೆ ವಿನಃ  ಗ್ರೀನ್‌ ಸ್ವರೂಪ ಪಡೆಯಬಾರದು..’ -ಇದು ಸಂಘ ಪರಿವಾರದ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಅವರ ಅಭಿಪ್ರಾಯ ಹಾಗೂ
ಎಚ್ಚರಿಕೆ ಸಂದೇಶ. ಸಂಘ ಯಾವತ್ತು ನೇರವಾಗಿ ರಾಜಕೀಯ ಪ್ರವೇಶ ಮಾಡುವುದಿಲ್ಲ. ಆದರೆ, ಸಂಘ ತತ್ವಕ್ಕೆ ಮನ್ನಣೆ
ನೀಡುವ ಪಕ್ಷ-ವ್ಯಕ್ತಿಗಳಿಗೆ ಅಗತ್ಯ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುತ್ತದೆ. ಬಿಜೆಪಿ ಭಿನ್ನಾಭಿಪ್ರಾಯ ಆಂತರಿಕ ವೇದಿಕೆಯಲ್ಲಿ ಚರ್ಚೆಯಾಗಬೇಕೆ ವಿನಃ ಬೀದಿ ರಂಪವಾಗಿಸಲು ಯತ್ನಿಸಬಾರದು ಎಂದರು. 

Advertisement

ಬಿಜೆಪಿಯ ಇತ್ತೀಚೆಗಿನ ವಿದ್ಯಮಾನ ಹಾಗೂ ಸಂಘ ಕಾರ್ಯದ ಕುರಿತಾಗಿ “ಉದಯವಾಣಿ’ಯೊಂದಿಗೆ ಮಾತನಾಡಿದ ಕಲ್ಲಡ್ಕ ಪ್ರಭಾಕರ್‌ ಭಟ್‌, ಬಿಜೆಪಿಯಲ್ಲಿ ಭಿನ್ನಮತದ ಗಾಯಕ್ಕೆ ಆ ಪಕ್ಷದ ರಾಷ್ಟ್ರೀಯ ವರಿಷ್ಠರು ಮುಲಾಮು ಹಚ್ಚಿದ್ದಾರೆ. ವಾಸಿಯಾಗುವ ನಿರೀಕ್ಷೆಯಂತೂ ಇದೆ. ಅದು ಇನ್ನಷ್ಟು ತೊಂದರೆ ಸೃಷ್ಟಿಸುವಂತಾಗದಿರಲಿ ಎಂದರು. ಪ್ರಧಾನಿ ಮೋದಿ ವಿಶ್ವಕ್ಕೇ ಆಶಾಕಿರಣ ರೀತಿಯಲ್ಲಿ ದೇಶವನ್ನು ಮುನ್ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ. 

ಅವರನ್ನು ಕೆಲವರು ಸರ್ವಾಧಿಕಾರಿ ಎಂದು ಕರೆಯಬಹುದು. ದೇಶವನ್ನು ಸರಿದಾರಿಗೆ ತರಲು, ಇಲ್ಲಿನ ಸ್ಥಿತಿ ಪುನರುಜ್ಜೀವನಗೊಳಿಸಲು ಒಂದಿಷ್ಟು ಸರ್ವಾಧಿಕಾರಿ ಗುಣ ಬೇಕಾಗುತ್ತದೆ. ಅದೇನೂ ಸ್ವಾರ್ಥಕ್ಕೆ ಬಳಕೆಯಾಗುತ್ತಿಲ್ಲ. ದೇಶದ ಹಿತಕ್ಕೆ ಪೂರಕವಾಗಿದೆ. ದೇಶ 
ಕಟ್ಟುವ ನಿಟ್ಟಿನಲ್ಲಿ ಮೋದಿಯೊಬ್ಬರೇ ಸೆಣಸಿದರೆ ಸಾಲದು, ಪಕ್ಷದ ಕೆಳಗಿನವರಿಗೂ ಅದು ಬರಬೇಕಾಗಿದೆ. ಇಡೀ ವಿಶ್ವವೇ ಭಾರತದ ಕಡೆ ನೋಡುವಂತಹ ಸನ್ನಿವೇಶದಲ್ಲಿ, ರಾಜ್ಯ ಬಿಜೆಪಿಯಲ್ಲಿ ಇಂತಹ ಕಿತ್ತಾಟ ಅಗತ್ಯವಿತ್ತೇ? ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಅನೇಕರ ಭಾವನೆಗಳಿಗೆ ಪೆಟ್ಟಾಗಿದೆ. ಪಕ್ಷದಲ್ಲಿ ಕೆಲ ವಿಚಾರದಲ್ಲಿ
ಭಿನ್ನಾಭಿಪ್ರಾಯ, ಅಸಮಾಧಾನ ಸಹಜ. ಅದೇನಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಬೇಕು. ಬೀದಿ ರಂಪದಿಂದ ಮನಸ್ಸುಗಳು ದೂರವಾಗುತ್ತವೆ ಎಂಬುದನ್ನು ಅರಿಯಬೇಕು ಎಂದರು. 

ಸ್ಲೋಗನ್‌ಗೆ ಸೀಮಿತ ಬೇಡ: ಇತರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ವಿಭಿನ್ನ ಎಂಬ ಸ್ಲೋಗನ್‌ ಅಷ್ಟಕ್ಕೇ ಸೀಮಿತವಾಗಬಾರದು. ಮುಖ್ಯವಾಗಿ ಕಾರ್ಯಕರ್ತರಲ್ಲಿ ಇದು ಆತ್ಮವಿಶ್ವಾಸ ಬೆಳೆಸುವಂತಾಗಬೇಕು. ನಿಜವಾದ ಮಣ್ಣಿನ ಮಗನ ಪಟ್ಟ ದಕ್ಕಬೇಕಾಗಿರುವುದು
ಯಡಿಯೂರಪ್ಪಗೆ.ಅಂತಹ ನಾಯಕರು ಕಾಂಗ್ರೆಸ್‌ -ಜೆಡಿಎಸ್‌ನಲ್ಲಿಲ್ಲ ಎಂಬುದು ಜನರ ಭಾವನೆ. ಹಾಗೆಂದ ಮಾತ್ರಕ್ಕೆ ಯಡಿಯೂರಪ್ಪ ಮಾಡಿದ್ದೆಲ್ಲವೂ ಸರಿ ಎಂದು ನಾನು ಹೇಳಲಾರೆ. ಆಗಿರುವ ಸಣ್ಣ ಪುಟ್ಟ ಗೊಂದಲಗಳನ್ನು ಪರಸ್ಪರ ಮಾತುಕತೆ ಮೂಲಕ
ಇತ್ಯರ್ಥ ಪಡಿಸಿಕೊಳ್ಳುವುದು ಒಳಿತು ಎಂದರು.

ಬೆಂಬಲಿಗರ ಸಂಖ್ಯೆ ಹೆಚ್ಚಿದೆ, ನಿರೀಕ್ಷಿತ ಮಟ್ಟ ತಲುಪಿಲ್ಲ ಕೆಲವರು ಸಂಘ ಪರಿವಾರಕ್ಕೆ ಬೆಂಬಲಿಗರ ಸಂಖ್ಯೆ ಕುಗ್ಗಿದೆ ಎಂಬ ಟೀಕೆ ಮಾಡುತ್ತಿದ್ದಾರೆ. ಆದರೆ ವಾಸ್ತವ ಎಂದರೆ ಶಾಖೆ, ಕಾರ್ಯಕರ್ತರು, ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಇನ್ನೂ ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ ಎಂಬ ಆತ್ಮಾವಲೋಕನವೂ ಸಂಘದ್ದಾಗಿದ್ದು, ಈ ನಿಟ್ಟಿನಲ್ಲಿ ಹಲವು ಯತ್ನಗಳು ನಡೆದಿವೆ. “ಜಾತ್ಯತೀತ’ ಅಡಿಯಲ್ಲಿ ಎಲ್ಲವನ್ನೂ ದಾರಿ ತಪ್ಪಿಸುವ ಯತ್ನಗಳು ನಡೆಯುತ್ತಿವೆ. ನಾವು ಇನ್ನೊಬ್ಬರ ದೇವರನ್ನು ಅಲ್ಲಗಳೆಯುತ್ತಿಲ್ಲ. ಬದಲಾಗಿ ನಮ್ಮ ದೇವರನ್ನು ಪೂಜಿಸಿ, ಪೂರ್ವಜರ ಪರಂಪರೆ, ಧರ್ಮ ಚಿಂತನೆ, ಸಂಪ್ರದಾಯಗಳಿಗೆ ಗೌರವ ನೀಡಿ, ರಾಷ್ಟ್ರಪ್ರೇಮ ಬೆಳೆಸಿಕೊಳ್ಳಿ ಎಂದು ಹಿಂದೂ ಧರ್ಮೀಯರಿಗೆ ಹೇಳಲು ಮುಂದಾದರೆ ನಮಗೆ ಕೋಮುವಾದ ಪಟ್ಟ ಕಟ್ಟಲಾಗುತ್ತಿದೆ. ಎಲ್ಲರಿಗೂ ಜೀವನ ಧರ್ಮ ಕಲಿಸುವ, ದೇಶಪ್ರೇಮ ಬೆಳೆಸುವ ಕಾರ್ಯದಲ್ಲಿ ಸಂಘ ನಿರಂತರವಾಗಿದೆ, ಅದೇ ಹಾದಿಯಲ್ಲಿ ಮುಂದುವರಿಯಲಿದೆ ಎಂದು ಕಲ್ಲಡ್ಕ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next