ಬೆಂಗಳೂರು: ಬಿಜೆಪಿ ಹಮ್ಮಿಕೊಂಡಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಆ.11ಕ್ಕೆ ಮುಕ್ತಾಯವಾಗಲಿದ್ದು, ರಾಜ್ಯದಲ್ಲಿ ಜು.6ರಿಂದ ಈವರೆಗೆ 25 ಲಕ್ಷ ಮಂದಿ ಸದಸ್ಯತ್ವ ಪಡೆದಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ಪಡೆದವರ ಸಂಖ್ಯೆ ಒಂದು ಕೋಟಿ ದಾಟಿದೆ. ಆ.20ರಿಂದ ಸೆ.20ರವರೆಗೆ ಮತ್ತೂಂದು ಸುತ್ತಿನಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ರಾಜ್ಯ ಬಿಜೆಪಿ ಸಿದ್ಧತೆ ನಡೆಸಿದೆ.
ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾದ್ಯಂತ ಸದಸ್ಯತ್ವ ಅಭಿಯಾನ ಕೈಗೊಂಡಿತ್ತು. ರಾಜ್ಯದಲ್ಲಿ ಆರಂಭದಲ್ಲಿ ಸದಸ್ಯತ್ವ ನೋಂದಣಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಜು.6ರಂದು ಶುರುವಾದ ಅಭಿಯಾನದಡಿ ಮೊದಲ 15 ದಿನಗಳಲ್ಲಿ 9 ಲಕ್ಷ ಮಂದಿ ಸದಸ್ಯತ್ವ ಪಡೆದಿದ್ದರು. ಹಾಗಾಗಿ, ಅಭಿಯಾನ ಮುಕ್ತಾಯವಾಗುವ ಆ.11ರೊಳಗೆ ಒಟ್ಟು 50 ಲಕ್ಷ ಸದಸ್ಯತ್ವ ನೋಂದಣಿ ಗುರಿ ತಲುಪುವ ವಿಶ್ವಾಸದಲ್ಲಿ ರಾಜ್ಯ ಬಿಜೆಪಿ ನಾಯಕರಿದ್ದರು.
ಆದರೆ, ಕಾಂಗ್ರೆಸ್, ಜೆಡಿಎಸ್‌ನ ಕೆಲ ಅತೃಪ್ತ ಶಾಸಕರ ರಾಜೀನಾಮೆ ನಂತರ ನಡೆದ ಬೆಳವಣಿಗೆ, ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯ, ಸಮ್ಮಿಶ್ರ ಸರ್ಕಾರ ಪತನ, ಬಿಜೆಪಿ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಸದಸ್ಯತ್ವ ನೋಂದಣಿ ನಿರೀಕ್ಷಿತ ಪ್ರಮಾಣದಲ್ಲಿ ನಡೆಯಲಿಲ್ಲ. ಈ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ತಲೆದೋರಿದ್ದು, ಪ್ರವಾಹ ಕಾಣಿಸಿಕೊಂಡಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿ ಆಸ್ತಿಪಾಸ್ತಿಗೆ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಸ್ಥಳೀಯರು ಸಂತ್ರಸ್ತರಾಗಿ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸದಸ್ಯತ್ವ ಅಭಿಯಾನಕ್ಕೂ ಹಿನ್ನಡೆಯಾಗಿದೆ. ಹಾಗಾಗಿ, ಸದಸ್ಯತ್ವ ನೋಂದಣಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸ್ಥಗಿತವಾದಂತಾಗಿದೆ.
ಸಂಪುಟ ರಚನೆ ವಿಳಂಬದಿಂದಲೂ ಹಿನ್ನಡೆ: ಸರ್ಕಾರ ರಚನೆಯಾಗಿ 14 ದಿನವಾದರೂ ಸಂಪುಟ ರಚನೆಯಾಗಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳಾದ ಹಿರಿಯ ಶಾಸಕರು, ಮಾಜಿ ಸಚಿವರು, ಯುವ ಶಾಸಕರು ಸಂಪುಟ ರಚನೆಯತ್ತಲೇ ದೃಷ್ಟಿ ನೆಟ್ಟಿದ್ದಾರೆ. ಹಾಗಾಗಿ ಸದಸ್ಯತ್ವ ಅಭಿಯಾನಕ್ಕೆ ಹೆಚ್ಚಿನ ಗಮನ ನೀಡಿದಂತಿಲ್ಲ ಎನ್ನಲಾಗಿದೆ. ಸಂಪುಟ ರಚನೆ ಬಳಿಕ ಸದಸ್ಯತ್ವ ನೋಂದಣಿ ಚುರುಕುಗೊಂಡು ಉದ್ದೇಶಿತ ಗುರಿ ತಲುಪಲು ಸಾಧ್ಯ ಎಂಬುದು ರಾಜ್ಯ ಬಿಜೆಪಿಯ ನಾಯಕರ ಲೆಕ್ಕಾಚಾರ.
Advertisement
ಆ.15ರ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಬ್ಬ ಪ್ರಮುಖ್‌ರನ್ನು ನಿಯೋಜಿಸಲಾಗುತ್ತಿದ್ದು, ಅವರು ಎರಡು ದಿನ ಆ ಕ್ಷೇತ್ರದಲ್ಲೇ ಇದ್ದು, ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ, ಮತ್ತೂಂದು ಸುತ್ತಿನಲ್ಲಿ ಸದಸ್ಯತ್ವ ನೋಂದಣಿಯನ್ನು ತೀವ್ರಗೊಳಿಸಿ 50 ಲಕ್ಷ ಸದಸ್ಯತ್ವ ನೋಂದಣಿಯ ಗುರಿ ತಲುಪಲು ಪಕ್ಷ ಸಜ್ಜಾಗಿದೆ.
Related Articles
Advertisement
ಆ.20ರಿಂದ ಸೆ.20ರವರೆಗೆ ಅಭಿಯಾನ: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆ, ರಾಜ್ಯ ಸರ್ಕಾರ ಬದಲಾವಣೆ, ಬರ, ಅತಿವೃಷ್ಟಿ ಹಿನ್ನೆಲೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ ಸದಸ್ಯತ್ವ ನೊಂದಣಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಾಧ್ಯವಾಗದ ಕಾರಣ ಆ.20ರಿಂದ ಸೆ.20ರವರೆಗೆ ರಾಜ್ಯದಲ್ಲಿ ಮತ್ತೂಂದು ಸುತ್ತಿನಲ್ಲಿ ಅಭಿಯಾನ ನಡೆಸಲು ಬಿಜೆಪಿ ಮುಂದಾಗಿದೆ.
ದಿಢೀರ್ ರಾಜಕೀಯ ಬೆಳವಣಿಗೆ ಹಾಗೂ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಆ.15ರ ಬಳಿಕ ತಿಂಗಳ ಮಟ್ಟಿಗೆ ಮತ್ತೂಂದು ಸುತ್ತಿನಲ್ಲಿ ಅಭಿಯಾನ ನಡೆಸಲು ಸಿದ್ಧತೆ ನಡೆದಿದೆ. ಆ.20ರಿಂದ ಸೆ.20ರವರೆಗೆ ಅಭಿಯಾನ ನಡೆಸುವ ಬಗ್ಗೆ ರಾಷ್ಟ್ರೀಯ ಸದಸ್ಯತ್ವ ಅಭಿಯಾನ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾಹಿತಿ ನೀಡಲಾಗಿದ್ದು, ಬಹುತೇಕ ಒಪ್ಪಿಗೆ ನೀಡಿದ್ದಾರೆ. ಸದ್ಯ 25 ಲಕ್ಷ ಸದಸ್ಯತ್ವ ನೋಂದಣಿಯಾಗಿದ್ದು, ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ಪಡೆದವರ ಸಂಖ್ಯೆ 1.05 ಕೋಟಿಗೆ ಏರಿಕೆಯಾಗಿದೆ.
-ಜಗದೀಶ ಹಿರೇಮನಿ, ರಾಜ್ಯ ಬಿಜೆಪಿ ಸದಸ್ಯತ್ವ ಅಭಿಯಾನ ಸಹ ಉಸ್ತುವಾರಿ.
-ಜಗದೀಶ ಹಿರೇಮನಿ, ರಾಜ್ಯ ಬಿಜೆಪಿ ಸದಸ್ಯತ್ವ ಅಭಿಯಾನ ಸಹ ಉಸ್ತುವಾರಿ.