Advertisement

ನೀರಿಗಾಗಿ ಬಿಜೆಪಿ ಸದಸ್ಯರ ಸಭಾತ್ಯಾಗ

12:23 PM Mar 31, 2019 | Team Udayavani |

ಬೆಂಗಳೂರು: ನಗರದ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವಲ್ಲಿ ಜಲಮಂಡಳಿಹಾಗೂ ಮಂಡಳಿಗೆ ಸೂಚನೆ ನೀಡುವಲ್ಲಿ ಬಿಬಿಎಂಪಿ ವಿಫ‌ಲವಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

Advertisement

ಪಾಲಿಕೆಯ ಕೆಂಪೇಗೌಡ ಪೌರಸಭಾಂಗಣದಲ್ಲಿ ಶನಿವಾರ ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಚರ್ಚಿಸಲು ಮೇಯರ್‌ ಕರೆದಿದ್ದ ವಿಶೇಷ ಸಭೆ ಆರಂಭದಲ್ಲಿಯೇ ಬಿಜೆಪಿ ಸದಸ್ಯರು, ಪಾಲಿಕೆಯ 198 ವಾರ್ಡ್‌ಗಳ ಪೈಕಿ ಶೇ.75 ಕಡೆ ಕೊಳವೆಬಾವಿಗಳಲ್ಲಿ ನೀರಿಲ್ಲ. ಜನರಿಗೆ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿಯಾಗಿದೆ ಎಂದು ದೂರಿದರು.

ನೀರಿನ ಸಮಸ್ಯೆಯ ಪರಿಹಾರ ಒದಗಿಸಲು ಪಾಲಿಕೆ ಅಧಿಕಾರಿಗಳಿಗೆ ಕರೆ ಮಾಡಿದರೆ ಚುನಾವಣೆ ಕೆಲಸದಲ್ಲಿರುವಾಗಿ ಹೇಳುತ್ತಾರೆ. ಇನ್ನು ಜಲಮಂಡಳಿಯಿಂದ ಸಮರ್ಪಕವಾಗಿ ನೀರು ಪೂರೈಕೆ ಮಾಡುವುದಿಲ್ಲ. ಹಣ ನೀಡುತ್ತೇವೆ ಟ್ಯಾಂಕರ್‌ ಕಳುಹಿಸಿ ಎಂದರೂ ಜಲಮಂಡಳಿ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಾರೆ ಎಂದು ಆರೋಪಿಸಿದರು.

ವಿಪಕ್ಷ ನಾಯಕ ಪದ್ಮಾಭರೆಡ್ಡಿ ಮಾತನಾಡಿ, ಜಲಮಂಡಳಿಯವರು ಬೇಸಿಗೆ ಅವಧಿಗೆ ಪೂರೈಕೆ ಮಾಡಲು ಅಗತ್ಯ ನೀರಿದೆ ಎಂದು ಹೇಳುತ್ತಿದ್ದಾರೆ. ಆದರೆ, ನೀರು ಪಂಪ್‌ ಮಾಡುವ ಸ್ಥಳಗಳಲ್ಲಿ ವಿದ್ಯುತ್‌ ಕೈಕೊಡುತ್ತಿರುವುದರಿಂದ ಸಮರ್ಪಕವಾಗಿ ನಗರಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಇನ್ನು ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಹೊಸದಾಗಿ ಕೊಳವೆ ಬಾವಿ ಕೊರೆಯದಂತಾಗಿದೆ ಎಂದು ಆರೋಪಿಸಿದರು.

ಅದಕ್ಕೆ ಉತ್ತರ ನೀಡಿದ ವಿಶೇಷ ಆಯುಕ್ತ ರಂದೀಪ್‌, ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕುಡಿಯುವ ನೀರು, ಆರೋಗ್ಯ ಸೇವೆ ಹಾಗೂ ತುರ್ತು ಕೆಲಸಗಳನ್ನು ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಅದರಂತೆ ಸಮಸ್ಯೆಯಿರುವ ಕಡೆಗಳಲ್ಲಿ ಪಾಲಿಕೆಯಿಂದ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಲೋಕಸಭಾ ಚುನಾವಣೆ ಬಳಿಕ ಕೊಳವೆಬಾವಿಗಳನ್ನು ಕೊರೆಸಲಾಗುವುದು ಎಂದರು.

Advertisement

ಪಾಲಿಕೆ ಜಾಗ ವಶಕ್ಕೆ ಮೀನಮೇಷವೇಕೆ?: ವಿಜಯನಗರ ವಾರ್ಡ್‌ನಲ್ಲಿ ಪಾಲಿಕೆ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಲಾಗಿದೆ. ಆಯುಕ್ತರು ಕಟ್ಟಡ ತೆರವುಗೊಳಿಸುವಂತೆ ಆದೇಶಿಸಿದ್ದಾರೆ. ಆದರೆ, ಅಧಿಕಾರಿಗಳು ಈವರೆಗೆ ತೆರವಿಗೆ ಮುಂದಾಗಿಲ್ಲ.

ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕಟ್ಟಡ ತೆರವಿಗೆ ಬೇಕಾಗಿರುವ 2 ಲಕ್ಷ ರೂ. ಹಣವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಪಾಲಿಕೆ ಸದಸ್ಯೆ ಲತಾ ಆರೋಪಿಸಿದರು. ವಿಶೇಷ ಆಯುಕ್ತ ರಂದೀಪ್‌ ಪ್ರತಿಕ್ರಿಯಿಸಿ, ಬಿಬಿಎಂಪಿಯಲ್ಲಿ ಹಣದ ಕೊರತೆಯಿಲ್ಲ. ಕೂಡಲೇ ಕಟ್ಟತ ತೆರವಿಗೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ವಿದ್ಯುತ್‌ ಕಡಿತದಿಂದ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳಿದ್ದು, ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಪಾಲಿಕೆ ಸದಸ್ಯರು ಟ್ಯಾಂಕರ್‌ ಕಳುಹಿಸಿದರೆ ಉಚಿತವಾಗಿ ನೀರು ತುಂಬಿಸಿಕೊಡಲಾಗುವುದು.
-ಸುರೇಶ್‌, ಜಲಮಂಡಳಿ ಸಹಾಯಕ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next