Advertisement
ಪರಲ್ ನಿವಾಸಿ ಅಬೀದ್ ಬಂಧಿತ ಆರೋಪಿ ಎನ್ನಲಾಗಿದೆ. ಹಂತಕರ ಪತ್ತೆಗಾಗಿ ರಚಿಸಲಾಗಿರುವ ಕರ್ನಾಟಕ ಪೊಲೀಸರ ವಿಶೇಷ ತಂಡವು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದೆ. ಆರೋಪಿ ಚಿಕನ್ ಸೆಂಟರ್ ಒಂದರ ನೌಕರನಾಗಿದ್ದು ಪ್ರವೀಣ್ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಕೇರಳದ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಅಬಿದ್ ಮನೆಯನ್ನು ಶೋಧಿಸಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ಗೌಪ್ಯವಾಗಿರಿಸಿದ್ದು ಹೆಚ್ಚಿನ ತನಿಖೆಯ ದೃಷ್ಟಿಯಿಂದ ಬಹಿರಂಗಪಡಿಸಿಲ್ಲ.
ಬಂಧಿತ ಅಬಿದ್ ದೇಶದ ಸ್ವಾಸ್ಥ ಕದಡುವ ಹಿನ್ನೆಲೆಯ ವಾಟ್ಸ್‌ಆ್ಯಪ್ ಗುಂಪಿನ ಸದಸ್ಯ ಎಂದು ತಿಳಿದು ಬಂದಿದೆ. ಪ್ರವೀಣ್ ನೆಟ್ಟಾರು ಕೊಲೆ ನಡೆದ ದಿನ ದ.ಕ. ಜಿಲ್ಲೆಯಲ್ಲಿದ್ದು ಮರುದಿನ ತಲಶ್ಶೇರಿಗೆ ಹಿಂದಿರುಗಿದನೆಂದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನುವ ಮಾಹಿತಿ ಲಭಿಸಿದೆ. ಈಗಾಗಲೇ ಹತ್ಯೆಯ ಹಂತಕರಿಗೆ ಮಾಹಿತಿ ನೀಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು ಓರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ 28 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆ. 3 ತನಕ ಪೊಲೀಸ್ ಕಸ್ಟಡಿ
ಬಂಧಿತರಾದ ಝಾಕಿರ್, ಶಫೀಕ್‌ನನ್ನು ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಆ. 3ರ ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
Related Articles
ಪ್ರವೀಣ್‌ಗೆ ಬೆದರಿಕೆ ಇರುವ ಬಗ್ಗೆ ಆತ ಪೊಲೀಸರಿಗೆ ತಿಳಿಸಿದ್ದರೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಬೆಳ್ಳಾರೆ ಠಾಣಾ ಪೊಲೀಸ್ ಕಾನ್‌ಸ್ಟೆಬಲ್‌ಗೆ ಈ ಮಾಹಿತಿ ಇತ್ತು. ಅದಾಗ್ಯೂ ಅವರು ನಿರ್ಲಕ್ಷಿಸಿದ್ದರು ಎನ್ನುವ ಬಗ್ಗೆ ಸಾಮಾಜಿಕ ಜಾಲದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹತ್ಯೆ ನಡೆದ ಕೆಲ ದಿನಗಳ ಮೊದಲು ಕೇರಳ ನೋಂದಣಿಯ ವಾಹನ ಬೆಳ್ಳಾರೆಯಲ್ಲಿ ಓಡಾಟ ನಡೆಸುತ್ತಿದ್ದರೂ ಪೊಲೀಸರು ತನಿಖೆ ನಡೆಸದಿರುವುದು ಕೂಡ ಸಾರ್ವಜನಿಕರ ಅನುಮಾನಕ್ಕೆ ಕಾರಣವೆನಿಸಿದೆ.
Advertisement
ಹಿರಿಯ ಅಧಿಕಾರಿಗಳ ಸಭೆಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಚಂದ್ರ, ವಿಶೇಷಾಧಿಕಾರಿ ಅನುಚೇತ್ ಮೊದಲಾದವರು ಭಾಗವಹಿಸಿದ್ದರು. ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದ ತನಿಖೆಯ ಪ್ರಗತಿ, ಮುಂದಿನ ಕಾರ್ಯತಂತ್ರ, ಆರೋಪಿಗಳ ಪತ್ತೆ ಕಾರ್ಯ ಮೊದಲಾದವುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ರಂಗಕ್ಕಿಳಿದ ಎನ್‌ಐಎ
ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸುವುದಕ್ಕಾಗಿ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ತಂಡ ಜಿಲ್ಲೆಗೆ ಈಗಾಗಲೇ ಆಗಮಿಸಿರುವುದಾಗಿ ತಿಳಿದುಬಂದಿದೆ. ಕೋಮುದ್ವೇಷದ ಹತ್ಯೆ ವಿಚಾರದಲ್ಲಿ ದ.ಕ. ಜಿಲ್ಲೆಯಲ್ಲಿ ಎನ್‌ಐಎ ತನಿಖೆ ನಡೆಸಲಿರುವ ಮೊದಲ ಪ್ರಕರಣ ಇದಾಗಲಿದೆ. ಲಭ್ಯ ಮಾಹಿತಿಯಂತೆ ಎನ್‌ಐಎಯ ಓರ್ವ ಎಸ್ಪಿ ಸಹಿತ ಕೆಲವು ಅಧಿಕಾರಿಗಳು ಜಿಲ್ಲೆಗೆ ಆಗಮಿಸಿದ್ದಾರೆ. ಜು. 29ರಂದಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವುದಾಗಿ ಪ್ರಕಟಿಸಿದ್ದರು. ಈ ಹಿಂದೆ ಎನ್‌ಐಎ ತಂಡ ಜಿಲ್ಲೆಯಲ್ಲಿ ಕೆಲವೊಂದು ಉಗ್ರಚಟುವಟಿಕೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಆಗಮಿಸಿತ್ತು. ಆದರೆ ಕೊಲೆಯಂತಹ ಪ್ರಕರಣದ ನೇರ ತನಿಖೆ ಮಾಡಿರಲಿಲ್ಲ. ಸದ್ಯ ಪ್ರವೀಣ್ ಅವರದ್ದು ಸಂಘಟಿತ ಹತ್ಯೆ ಎಂಬ ಅನುಮಾನ ಹಾಗೂ ಅಂತಾರಾಜ್ಯ ವಿಚಾರವೂ ಆಗಿರುವುದರಿಂದ ತನಿಖೆಯನ್ನು ಎನ್‌ಐಎಗೆ ವಹಿಸಲಾಗುತ್ತಿದೆ ಎಂದು ಸಿಎಂ ಬೆಂಗಳೂರಿನಲ್ಲಿ ತಿಳಿಸಿದ್ದರು. ತನಿಖೆ ಕೈಗೆತ್ತಿಕೊಳ್ಳಲು ಕಾಲಾವಕಾಶ ಬೇಕು
ಸಿಎಂ ಈಗಾಗಲೇ ತನಿಖೆಯನ್ನು ಎನ್‌ಐಎಗೆ ಒಪ್ಪಿಸುವುದಾಗಿ ತಿಳಿಸಿದ್ದರೂ ಅಧಿಕೃತವಾಗಿ ಪ್ರಕರಣದ ಹಸ್ತಾಂತರ ಕಾರ್ಯಕ್ಕೆ ಕೆಲವು ದಿನಗಳು ಬೇಕಾಗಬಹುದು. ಸದ್ಯ ಪೊಲೀಸರು ನಡೆಸುತ್ತಿರುವ ತನಿಖೆಯ ಸಂಬಂಧಿತ ದಾಖಲೆಗಳನ್ನು ಕೋರ್ಟ್ ಮೂಲಕ ಎನ್‌ಐಎ ಪಡೆದುಕೊಳ್ಳುತ್ತದೆ. ಅಗತ್ಯ ಮಾಹಿತಿಯನ್ನು ಪೊಲೀಸರಿಂದ ಪಡೆದುಕೊಳ್ಳುತ್ತಾರೆ. ಸದ್ಯ ಪ್ರಕರಣದ ವಿಚಾರದಲ್ಲಿ ಎನ್‌ಐಎ ಪ್ರಾಥಮಿಕ ಮಾಹಿತಿಗಳನ್ನು ಪಡೆದುಕೊಂಡು ಮುಂದೆ ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸುಪಾರಿ ಗ್ಯಾಂಗ್‌ನಿಂದ ಕೃತ್ಯ?
ಕುಂಬಳೆ: ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿದ್ದು ಕೇರಳದ ಸುಪಾರಿ ತಂಡವೇ ಎಂಬ ಪ್ರಶ್ನೆ ಎದ್ದಿದೆ. ಪ್ರಸ್ತುತ ಕೇರಳದಲ್ಲಿ ಬಂಧಿಸಿರುವ ವ್ಯಕ್ತಿ ಕೊಟೇಶನ್ ಗ್ಯಾಂಗ್ (ಸುಪಾರಿ ತಂಡ) ಸದಸ್ಯ ಎಂಬ ಮಾತು ಕೇಳಿಬರುತ್ತಿದೆ.ಪೊಲೀಸರು ಇದನ್ನು ಇನ್ನೂ ಖಚಿತಪಡಿಸಿಲ್ಲ. ತಲಶ್ಶೇರಿಯ ಪರಲ್ ನಿವಾಸಿ ಅಬೀದ್ ಎಂಬಾತನನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದು, ಆತ ಸುಪಾರಿ ತಂಡದಲ್ಲಿದ್ದು, ಇಂತಹ ಕೃತ್ಯ ನಡೆಸುವಾತ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೂ ಕೆಲವು ಬಾರಿ ಕೊಟೇಶನ್ ಗ್ಯಾಂಗ್‌ಗಳು ಕೇರಳದಲ್ಲಿ ಕೊಲೆಯಂತಹ ಕೃತ್ಯ ಎಸಗಿದ್ದವು. ಜಿಲ್ಲಾದ್ಯಂತ ಕಟ್ಟೆಚ್ಚರ
ಕೇರಳದ ಮಂಜೇಶ್ವರ, ಬದಿಯಡ್ಕ, ಆದೂರು, ರಾಜಾಪುರಂ, ಬೇಡಡ್ಕ ಠಾಣೆ ವ್ಯಾಪ್ತಿಯ ಗಡಿಗಳಲ್ಲಿ ನಿಗಾ ವಹಿಸಲು ಪೊಲೀಸರಿಗೆ ಸೂಚಿಸಲಾಗಿದೆ. ಕಣ್ಣೂರು ಮತ್ತು ವಯನಾಡು ಜಿಲ್ಲೆಗಳ ಕರ್ನಾಟಕ ಗಡಿ ಪ್ರದೇಶಗಳಲ್ಲಿ ಪೊಲೀಸ್ ನಿಗಾ ವಹಿಸಿದೆ. ಅಂತಾರಾಜ್ಯದಿಂದ ಬರುವ ಎಲ್ಲ ವಾಹನಗಳ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ವಾಹನಗಳನ್ನು ತಪಾಸಣೆ ನಡೆಸಿದ ಬಳಿಕವೇ ಸಂಚರಿಸಲು ಬಿಡಲಾಗುತ್ತಿದೆ. ಅಕ್ರಮ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಎಸ್‌ಪಿ ಆದೇಶಿಸಿದ್ದಾರೆ.